ನಗರದಲ್ಲಿ ಸ್ಪೀಡ್ ಬ್ರೇಕರ್ ಅಸ್ತವ್ಯಸ್ತ

ಕಿತ್ತು ಹೋಗಿರುವ ಹಂಪ್

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸ್ಮಾರ್ಟ್ ಸಿಟಿಯಾಗುವತ್ತ ಹೊರಟಿರುವ ಮಂಗಳೂರು ನಗರದಲ್ಲಿನ ಪ್ರಮುಖ ಸಮಸ್ಯೆ ಟ್ರಾಫಿಕ್. ಇದಕ್ಕೆ ಮೂಲ ಕಾರಣ ಅವೈಜ್ಞಾನಿಕ ಹಂಪುಗಳು, ಸ್ಪೀಡ್ ಬ್ರೇಕರುಗಳು. ಇದೀಗ ಸ್ಮಾರ್ಟ್ ಸಿಟಿಯ ಕಲ್ಪನೆಯೊಂದಿಗೆ ನಾವು ಸರಾಗ ರಸ್ತೆ ಸಂಚಾರಕ್ಕೆ ಪೂರಕವಾಗಬಲ್ಲ ಇಂತಹ ಸಮಸ್ಯೆಗಳನ್ನು ನಿವಾರಿಸುವತ್ತಲೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ.

ಪ್ರಮುಖವಾಗಿ ನಗರದಲ್ಲಿ ವಾಹನಗಳ ಸರಾಗ ಸಂಚಾರಕ್ಕೆ ಅಳವಡಿಸಲಾಗಿರುವ, ಅಪಘಾತಗಳನ್ನು ತಡೆಗಟ್ಟಲೆಂದು ಹಾಕಲಾಗಿರುವ ಹಂಪುಗಳ ಅಧ್ವಾನಗಳೇ ಇಂದು ಹಲವು ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಆದರೆ ಇದನ್ನು ಸರಿಪಡಿಸಲು ಯಾರೂ ಮುಂದಾಗುತ್ತಿಲ್ಲ.

ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಗುಲಾಬ್ ರಾವ್ ಬೊರಸೆ, ನಗರದ ರಸ್ತೆ ಪಕ್ಕದಲ್ಲಿ ಅತಿಕ್ರಮಣ ಮಾಡಿಕೊಂಡಿರುವ ಕಟ್ಟಡಗಳ ಕೆಳಗೆ ಪಾರ್ಕಿಂಗಿಗೆ ಅವಕಾಶ, ಕೆಳಅಂತಸ್ತಿನಲ್ಲಿ ಪಾರ್ಕಿಂಗಿಗೆ ಜಾಗ ಬಿಟ್ಟುಕೊಡುವಂತೆ ಪಾಲಿಕೆಗೆ ಸೂಚಿಸಿದ್ದರು. ಆದರೆ ಆ ಕೆಲಸವನ್ನೂ ಇದುವರೆಗೂ ಪಾಲಿಕೆಗೆ ಮಾಡಿಲ್ಲ.

ಇನ್ನೊಂದೆಡೆ ನಗರದಲ್ಲಿ ಅಳವಡಿಸಲಾಗಿರುವ ಸ್ಪೀಡ್ ಬ್ರೇಕರುಗಳು ಕಿತ್ತು ಹೋಗಿದ್ದು, ವಾಹನ ಸವಾರರನ್ನು ಗಲಿಬಿಲಿಗೊಳಿಸುತ್ತಿವೆ. ಅಲ್ಲದೆ ಕೆಲವೇ ಸಮಯಗಳ ಹಿಂದೆ ಅಳವಡಿಸಲಾಗಿರುವ ಕೆಂಪು ಬಣ್ಣದ ಫೈಬರ್ ತಡೆಗಳು ತುಂಡಾಗಿ ಮಾರ್ಗದ ನಡುವೆ ಬಿದ್ದಿರುವುದು ಕಂಡು ಬರುತ್ತಿದೆ. ಕೆಲವು ಕಡೆಗಳಲ್ಲಿ ಸ್ಪೀಡ್ ಬ್ರೇಕರುಗಳಿಗೆ ಹಾಕಲಾಗಿರುವ ಬಣ್ಣವೂ ಮಾಸಿ ಹೋಗಿದೆ. ಅವೈಜ್ಞಾನಿಕವಾದ ರಸ್ತೆ ಹಂಪುಗಳನ್ನು ಹಲವು ಕಡೆಗಳಲ್ಲಿ ಅಳವಡಿಸಲಾಗಿದೆ.

ಸ್ಪೀಡ್ ಬ್ರೇಕರುಗಳನ್ನು ಇಂತಿಷ್ಟೇ ಎತ್ತರದಲ್ಲಿ ಹಾಕಬೇಕೆಂಬ ನಿಯಮವಿದೆ. 3.7 ಮೀಟರ್ ಅಗಲ ಮತ್ತು 0.10 ಮೀಟರ್ ದಪ್ಪಕ್ಕೆ ಇದನ್ನು ಹಾಕಬೇಕು. ಆದರೆ ನಗರದಲ್ಲಿ ಹಲವು ಕಡೆಗಳಲ್ಲಿ ಅಳವಡಿಸಲಾಗಿರುವ ಸ್ಪೀಡ್ ಬ್ರೇಕರುಗಳು ಅವೈಜ್ಞಾನಿಕವಾಗಿದೆ. ನಿರ್ದಿಷ್ಟ ಜಾಗದಲ್ಲಿ, ಅಗತ್ಯವಿರುವ ಕಡೆಗಳಲ್ಲಿ ಇವುಗಳನ್ನು ಅಳವಡಿಸಬೇಕೆಂಬ ನಿಯಮವಿದೆ. ಆದರೆ ಕೆಲವು ಕಡೆಗಳಲ್ಲಿ ಎಲ್ಲೆಂದರಲ್ಲಿ ಇವುಗಳನ್ನು ಅಳವಡಿಸಲಾಗಿದೆ. ಸ್ಪೀಡ್ ಬ್ರೇಕರುಗಳು ಭಾರೀ ಮಳೆಗೆ ಕರಗಿ ಹೋಗಿವೆ !