ಕಲ್ಲು ಕ್ವಾರೆ ಬಾಧಿತ ಮನೆಗಳಿಗೆ ಸೂಕ್ತ ಪರಿಹಾರ : ಎಸ್ಪಿ ಭರವಸೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ಎಸ್ಪಿ ನಿಂಬರ್ಗಿ ಬುಧವಾರ ನಡೆಸಿದ ಫೋನ್ ಇನ್ ಕಾರ್ಯಕ್ರಮದಲ್ಲಿ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಗಳಿಗೆ ಕಲ್ಲು ಕ್ವಾರೆ ಘಟಕದಿಂದ ಎದುರಾದ ಸಮಸ್ಯೆಗಳ ದೂರು ಕೇಳಿ ಬಂದಿತು. ಫೋನ್ ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿದ ನಿವಾಸಿಯೊಬ್ಬರು ಕೆಲವು ತಿಂಗಳಿನಿಂದ ಕಾರ್ಯಾಚರಣೆ ಆರಂಭಿಸಿರುವ ಕಲ್ಲು ಕ್ವಾರೆ ಘಟಕದಿಂದ ಶಿರ್ವದ ಪರಿಸರದ ಹಲವಾರು ಮನೆಗಳಲ್ಲಿ ಬಿರುಕುಗಳು ಉದ್ಭವಿಸಿರುವುದಾಗಿ ಎಸ್ಪಿಯವರ ಗಮನಕ್ಕೆ ತಂದರು. ಘಟಕ ಬಳಸುತ್ತಿರುವ ಸ್ಫೋಟಕ ವಸ್ತುಗಳು ಮನೆಗಳ ಗೋಡೆ ಬಿರುಕಿಗೆ ಕಾರಣವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ದೂರು ನೀಡಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರುದಾರರು ಅಹವಾಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ನಿಂಬರ್ಗಿ ಇನ್ನು ಮುಂದೆ ಯಾವತ್ತೂ ನಿವಾಸಿಗಳಿಗೆ ಇಂತಹ ಸಮಸ್ಯೆಗಳು  ಎದುರಾಗುವುದಿಲ್ಲ ಮತ್ತು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.

ಇನ್ನೊಬ್ಬ ಕರೆದಾರರು ಕರೆ ಮಾಡಿ ಶಿಕ್ಷಣ ಸಂಸ್ಥೆಗಳ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದ್ದರೂ ಶಾಲೆಯ ಪಕ್ಕದಲ್ಲಿರುವ ಅಂಗಡಿ ಮಾಲಕರೊಬ್ಬರು ಕಾನೂನು ಉಲ್ಲಂಘಿಸಿ ತಂಬಾಕು ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ದಾಳಿ ಕಾರ್ಯಾಚರಣೆಯನ್ನು ಕೈಗೊಂಡು ಇಂತಹ ವರ್ತನೆಗಳನ್ನು ಹತ್ತಿಕ್ಕಲಾಗುವುದು ಎಂದು ಎಸ್ಪಿ ಭರವಸೆ ನೀಡಿದ್ದಾರೆ. ಇನ್ನೊಬ್ಬರು ಕರೆಮಾಡಿ ಮಣಿಪಾಲ ಮತ್ತು ಉಡುಪಿ ಪ್ರದೇಶದಲ್ಲಿ ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಧರಿಸುವುದಿಲ್ಲ, ವೇಗವಾಗಿ ಅಜಾಗರೂಕತೆಯಿಂದ ವಾಹನ ಚಲಾಯಿಸುತ್ತಾರೆ, ಕರ್ಕಶ ಹಾರ್ನ್ ಸಮಸ್ಯೆಯೂ ಮುಂದುವರಿದಿದೆ, ಟ್ರಾಫಿಕ್ ಪೊಲೀಸರು ಇದುವರೆಗೆ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ. ವಾಹನಿಗರ ಇಂತಹ ವರ್ತನೆಗಳನ್ನು ಹತ್ತಿಕ್ಕಲು ಸದ್ಯದಲ್ಲೇ ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಳಿದ್ದಾರೆ. ಉಡುಪಿ ಬಸ್ ನಿಲ್ದಾಣದಲ್ಲಿ ಅಕ್ರಮ ಚಟುವಟಿಕೆಗಳು, ಕುಂದಾಪುರದಲ್ಲಿ ಸಾಲದ ನೆಪದಲ್ಲಿ ಹಣ ವಂಚನೆ, ಬ್ರಹ್ಮಾವರದಲ್ಲಿ ಅಕ್ರಮ ಮರಳು ಗಣಿಗಾರಿಕೆ ವ್ಯವಹಾರ ಮೊದಲಾದ ಸಮಸ್ಯೆಗಳೂ ಫೋನ್ ಇನ್ ಕಾರ್ಯಕ್ರಮದಲ್ಲಿ ಧ್ವನಿಯಾದವು. ಫೋನ್ ಇನ್ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಎಲ್ಲಾ ದೂರುಗಳಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಹೇಳಿದ್ದಾರೆ.

 

LEAVE A REPLY