ಉಚಿತ ವೈ-ಫೈ ಬಳಕೆ : ಎಸ್ಪಿ ಅಣ್ಣಾಮಲೈ ಎಚ್ಚರಿಕೆ

ನಮ್ಮ ಪ್ರತಿನಿಧಿ ವರದಿ

ಮಣಿಪಾಲ : ಕಾನೂನು ಸುವ್ಯವಸ್ಥೆಗೆ ದೊಡ್ಡ ಸವಾಲಾಗಿರುವ ಸೈಬರ್ ಅಪರಾಧಗಳ ನಿಯಂತ್ರಣವೇ ಇಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿವೆ ಎಂದು ಚಿಕ್ಕಮಗಳೂರು ಪೊಲೀಸ್ ಸುಪರಿಂಟೆಂಡ್ ಅಣ್ಣಾಮಲೈ ಹೇಳಿದ್ದಾರೆ.

ಅವರು ಮಣಿಪಾಲ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸೈಬರ್ ಅಪರಾಧ ಕುರಿತ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.

“ಮೊಬೈಲ್ ಬಳಕೆದಾರರು ಮಾರುಕಟ್ಟೆಗಳಲ್ಲಿ ದೊರೆಯುವ ಎಲ್ಲಾ ಆ್ಯಪ್‍ಗಳಲ್ಲಿ ನಂಬಿಕೆ ಇಡಬಾರದು. ಮೊಬೈಲ್ ಫೋನುಗಳು ಅತ್ಯಂತ ಅಪಾಯಕಾರಿ ಸೈಬರ್ ಅಪರಾಧಗಳ ತಾಣ” ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಅವರು ಉಚಿತ ವೈ-ಫೈ ಬಳಕೆ ಅತ್ಯಂತ ಅಪಾಯಕಾರಿ ಎಂದಿದ್ದಾರೆ. “ಇದರಿಂದ ಜನಸಾಮಾನ್ಯರ ರಹಸ್ಯ ಮಾಹಿತಿಗಳನ್ನು ಸುಲಭವಾಗಿ ದೋಚಿಕೊಳ್ಳಬಹುದು. ಇದು  ಕರೆನ್ಸಿ ವಂಚನೆಗಳಿಗೆ ಸುಲಭ ದಾರಿಯಾಗಬಹುದು. ಹಾಗಾಗಿ ಜನರು ಉಚಿತ ವೈ-ಫೈ ಬಳಕೆಯನ್ನು ನಿರ್ಲಕ್ಷಿಸುವುದೇ ಉತ್ತಮ” ಎಂದು ತಿಳಿಸಿದ್ದಾರೆ.