ಸರ್ಕಾರದ ಆದೇಶ ಮೀರಿ ಕಾಪು ಶಾಸಕ ನೇತೃತ್ವದಲ್ಲಿ ಪುರಸಭೆ ಕಟ್ಟಡಕ್ಕೆ ಶಿಲಾನ್ಯಾಸ

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ತಮಿಳುನಾಡು ಮುಖ್ಯಮಂತ್ರಿ ನಿಧನರಾದ ಹಿನ್ನಲೆಯಲ್ಲಿ ಶೋಕಚಾರಣೆ ನಡೆಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಯಾವುದೇ ಸಭೆ ಸಮಾರಂಭ ನಡೆಸಬಾರದೆಂಬ ಆದೇಶವನ್ನು ರಾಜ್ಯ ಸರ್ಕಾರ ಹೊರಡಿಸಿದ್ದರೂ, ಕಾಪು ಶಾಸಕ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಪು ಪುರಸಭೆಯ ಹೊಸ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಸುವ ಮೂಲಕ ಸರ್ಕಾರದ ಆದೇಶವನ್ನು ದಿಕ್ಕರಿಸಿದ ಘಟನೆ ಮಂಗಳವಾರ ಕಾಪುವಿನಲ್ಲಿ ನಡೆದಿದೆ.

ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ನಿಧನರಾದ ಹಿನ್ನಲೆಯಲ್ಲಿ ಡಿ 6ರ ಒಂದು ದಿನ ರಾಜ್ಯಾದ್ಯಂತ ಶೋಕಾಚರಣೆಯನ್ನು ಆಚರಿಸುವ ನಿಟ್ಟಿನಲ್ಲಿ ಈ ಅವಧಿಯಲ್ಲಿ ಯಾವುದೇ ಅಧಿಕೃತ ಸಾರ್ವಜನಿಕ ಸಮಾರಂಭಗಳು, ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಹಾಗೂ ನಿಯತವಾಗಿ ರಾಷ್ಟ್ರಧ್ವಜವನ್ನು ಹಾರಿಸುವ ಸರ್ಕಾರದ ಎಲ್ಲಾ ಕಟ್ಟಡಗಳಲ್ಲೂ ರಾಷ್ಟ್ರಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುವುದು ಎಂಬುದಾಗಿ ಕರ್ನಾಟಕ ರಾಜ್ಯಪಾಲರ ಅಜ್ಞಾನುಸಾರ ಸರ್ಕಾರದ ಉಪ ಕಾರ್ಯದರ್ಶಿ ಆದೇಶ ಹೊರಡಿಸಿದ್ದರು.

7pdb3

ಕಾಪುವಿನ ಬಂಗ್ಲೆ ಮೈದಾನದ ಒಳಭಾಗದಲ್ಲಿ ವೇದಿಕೆ ಹಾಗೂ ಶಾಮಿಯಾನಗಳನ್ನು ಅಳವಡಿಸಿ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಹೊಂದಿಸಿಕೊಂಡು ಸಾರ್ವಜನಿಕ ಕಾರ್ಯಕ್ರಮ ನಡೆಸಲಾಗಿದೆ.  ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಸರ್ಕಾರ ಕೂಡ ಮಾಡಿದ ಚೆಕ್ ವಿತರಣೆಯೂ ನಡೆಯಿತು.

ಸರ್ಕಾರದ ಪ್ರತಿನಿಧಿಯಾಗಿದ್ದು ಸರ್ಕಾರ ಹೊರಡಿಸಿದ ಆದೇಶಕ್ಕೆ ಅವರೇ ಬೆಲೆ ನೀಡದಿದ್ದರೆ, ಉಳಿದಂತೆ ಈ ಆದೇಶದ ವಿಚಾರವೇ ತಿಳಿಯದ ಜನ ಸಾಮಾನ್ಯರು ಈ ಆದೇಶಕ್ಕೆ ಬೆಲೆ ನೀಡಿಯಾರೇ ಎಂಬುದು ಪ್ರಜ್ಞಾವಂತ ನಾಗರಿಕರ ಪ್ರಶ್ನೆ.