ಬಿರುಕುಬಿಟ್ಟ ಸೂಡ ಪಾಪನಾಶಿನಿ ಸೇತುವೆ, ಸಂಚಾರಕ್ಕೆ ಆತಂಕ

ಸಂಚಾರಕ್ಕೆ ಆತಂಕ

ನಮ್ಮ ಪ್ರತಿನಿಧಿ ವರದಿ

ಕಾರ್ಕಳ : ನಿತ್ಯ ನೂರಾರು ವಾಹನಗಳು ಬಳಸುವ ಹಾಗೂ ಸುತ್ತಮುತ್ತಲಿನ ಸುಮಾರು ನಾಲ್ಕೈದು ಗ್ರಾಮವನ್ನು ಸಂಪರ್ಕಿಸುವ ಸೇತುವೆಯೊಂದು ಇದೀಗ ಸಂಪೂರ್ಣ ಶಿಥಿಲಗೊಂಡಿದ್ದು ಸಂಚಾರಕ್ಕೆ ಭೀತಿ ಎದುರಾಗಿದೆ.

ಕಾರ್ಕಳ ತಾಲೂಕಿನ ಸೂಡ ಗ್ರಾಮದ ಪಾಪನಾಶಿನಿ ನದಿಗೆ ಹಲವು ವರ್ಷಗಳ ಹಿಂದೆ ಕಟ್ಟಲಾದ ಈ ಸೇತುವೆಯು ಮೇಲ್ನೋಟಕ್ಕೆ ಗಟ್ಟಿಮುಟ್ಟಾಗಿ ಕಂಡರೂ ತಳಭಾಗ ಸಂಪೂರ್ಣ ಬಿರುಕು ಬಿಟ್ಟಿದ್ದು, ಸಿಮೆಂಟ್ ಸ್ಲ್ಯಾಬ್ ಕಿತ್ತುಹೋಗಿ ಕಬ್ಬಿಣದ ರಾಡುಗಳು ಗೋಚರಿಸುತ್ತಿದೆ.

ಈ ಸೇತುವೆ ಪ್ರಮುಖವಾಗಿ ಈ ಭಾಗದಲ್ಲಿ ಹಲವಾರು ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದ್ದು, ಒಂದು ವೇಳೆ ಈ ಸೇತುವೆ ಕುಸಿದರೆ ಸುತ್ತಮುತ್ತಲ ನಾಲ್ಕೈದು ಗ್ರಾಮದ ಜನರು ಪ್ರಮುಖ ಪಟ್ಟಣ ಪ್ರದೇಶದ ಸಂಪರ್ಕವನ್ನೆ ಕಳೆದುಕೊಳ್ಳಬೇಕಾಗುತ್ತದೆ.

ಸೂಡ ಗ್ರಾಮದ ಈ ಸೇತುವೆಯ ಮೂಲಕ ಮಣಿಪಾಲ ಹಾಗೂ ಉಡುಪಿಯನ್ನು ಸಂಪರ್ಕಿಸಲು ಹತ್ತಿರದ ರಸ್ತೆಯಾಗಿರುವ ಹಿನ್ನೆಲೆಯಲ್ಲಿ ಬಹುತೇಕ ವಾಹನಗಳು ಇದೇ ರಸ್ತೆಯಲ್ಲಿ ಸಂಚಾರ ನಡೆಸುತ್ತಿವೆ.

ಬಿರುಕುಬಿಟ್ಟ ಸೂಡ ಪಾಪನಾಶಿನಿ ಸೇತುವೆ
ಬಿರುಕುಬಿಟ್ಟ ಸೂಡ ಪಾಪನಾಶಿನಿ
ಸೇತುವೆ

ಸೂಡ ಗ್ರಾಮದ ವ್ಯಾಪ್ತಿಯಲ್ಲಿ ಹಲವಾರು ಕಲ್ಲಿನ ಕ್ವಾರಿಗಳು ಕಾರ್ಯಾಚರಿಸುತ್ತಿದ್ದು, ನಿತ್ಯ ಲಾರಿಗಳು ಭಾರೀ ಪ್ರಮಾಣದ ಜಲ್ಲಿ ಹೊತ್ತು ಇದೇ ಸೇತುವೆಯ ಮೂಲಕ ಸಂಚರಿಸುವ ಪರಿಣಾಮ ಸೇತುವೆ ಶಿಥಿಲಗೊಳ್ಳಲು ಕಾರಣವಾಗಿದೆ ಎನ್ನುವುದು ಗ್ರಾಮಸ್ಥರ ಆರೋಪ.

ಬಿಡುವಿಲ್ಲದೆ ಘನ ವಾಹನದ ಆರ್ಭಟದಿಂದಾಗಿ ಈ ಸೇತುವೆಯ ಬಿರುಕು ದಿನೇ ದಿನೇ ಹೆಚ್ಚಾಗಿ ಸಿಮೆಂಟ್ ಸ್ಲ್ಯಾಬ್ ಉದುರುತ್ತಿದ್ದು, ಕಬ್ಬಿಣದ ರಾಡುಗಳು ತುಕ್ಕು ಹಿಡಿದು ಕುಸಿಯುವ ಸಾಧ್ಯತೆ ಇದೆ.

ಈ ಸೇತುವೆ ನಿರ್ಮಾಣಗೊಂಡ ಬಳಿಕ ಇಲ್ಲಿಯವರೆಗೂ ನಿರ್ವಹಣೆ ಕಾಣದ ಹಿನ್ನೆಲೆಯಲ್ಲಿ, ತಕ್ಷಣವೇ ಲೋಕೋಪಯೋಗಿ ಇಲಾಖೆ ಈ ಸೇತುವೆಯ ದುರಸ್ತಿ ಕಾರ್ಯಕ್ಕೆ ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.