ಕೊನೆಗೂ ಸೂಡಾ ಮದ್ಮಲ್ ಬೈಲ್ ಅಣೆಕಟ್ಟಿಗೆ ಮುಕ್ತಿ

ಅಣೆಕಟ್ಟಿಗೆ ಮಣ್ಣು ತುಂಬಿಸುತ್ತಿರುವ ಬ್ರೇಟ್ ಗ್ರೂಪ್ ಸ್ವಯಂ ಸೇವಕರು

ನಮ್ಮ ಪ್ರತಿನಿಧಿ ವರದಿ

ಪಡುಬಿದ್ರಿ : ಸೂಡಾ ಗ್ರಾಮದ ಮದ್ಮಲ್ ಬೈಲ್ ಎಂಬ ಪ್ರದೇಶದಲ್ಲಿದ್ದ ಆ ಭಾಗದ ಕೃಷಿಕರ ಸಹಿತ ಕುಡಿಯುವ ನೀರಿನ ಬಾವಿಗಳ ಅಂತರ್ ಜಲ ವೃದ್ಧಿಸಲು ಸಹಕಾರಿಯಾದ ಅಣೆಕಟ್ಟು ಕಟ್ಟದಂತೆ ತಡೆದಿರುವುದೇ ಸ್ಥಳೀಯ ಈ ಅಣೆಕಟ್ಟಿನಿಂದ ಪ್ರಯೋಜ ಪಡೆಯುತ್ತಿರುವ ವ್ಯಕ್ತಿಯಾಗಿದ್ದಾರೆ ಎಂಬುದಾಗಿ ಸ್ಥಳೀಯ ಸಂಸ್ಥೆಯಾದ ಬ್ರೇಟ್ ಗ್ರೂಪ್ ಮುಖ್ಯಸ್ಥ ಶಂಕರ್ ಕುಂದರ್ ಆರೋಪಿಸಿದ್ದಾರೆ.

ಕೃಷಿಕರ ಜೀವನಾಡಿ ಮದ್ಮಲ್ ಬೈಲ್ ಅಣೆಕಟ್ಟೆಗೆ ತಡೆ ಹಾಕದಿರುವುದರಿಂದ ಈ ಭಾಗದ ಬಾವಿಗಳ ನೀರು ಬತ್ತಿ ಹೋಗುತ್ತಿದ್ದು, ಇದಕ್ಕೆ ಕಾರಣ ಈ ಅಣೆಕಟ್ಟು ಕಟ್ಟುವ ಗುತ್ತಿಗೆ ಪಡೆದುಕೊಂಡಿರುವ ಸ್ಥಳೀಯ ಸಂಸ್ಥೆಯಾದ ಬ್ರೇಟ್ ಗ್ರೂಪ್ ಕಾರಣ, ಅಲ್ಲದೆ ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳು ಕೂಡಾ ಸ್ಥಳಕ್ಕೆ ಬಾರದೆ ಗುತ್ತಿಗೆ ಪಡೆದುಕೊಂಡ ಸಂಸ್ಥೆಯ ಮುಖ್ಯಸ್ಥರು ಹೇಳಿದಂತೆ ಅವರು ನಡೆಯುತ್ತಿದ್ದರಿಂದ ಈ ಅಣೆಕಟ್ಟಿನ ಸ್ಥಿತಿ ಹೀಗಾಗಿದೆ ಎಂಬುದಾಗಿ ಸ್ಥಳೀಯ ನಿವಾಸಿ ಹರೀಶ್ ಶೆಟ್ಟಿ ಆರೋಪಿಸಿದ್ದರು.

ಅದಕ್ಕೆ ಪ್ರತಿಕ್ರಿಯಿಸಿದ ಬ್ರೇಟ್ ಗ್ರೂಪ್ ಸಂಸ್ಥೆಯ ಗೌರವ ಅಧ್ಯಕ್ಷ ಶಂಕರ್ ಕುಂದರ್, “ನಮ್ಮ ಸಂಸ್ಥೆಯ ಮುಖಾಂತರ ಯಾವುದೇ ಫಲ ಅಪೇಕ್ಷಿಸದೆ ನಮ್ಮ ಸಂಸ್ಥೆಯ ಸದಸ್ಯರು ಸ್ವಯಂ ಸೇವಕರಾಗಿ ದುಡಿದು ಈ ಕೆಲಸ ನಿರ್ವಹಿಸುತ್ತಾರೆ. ಇದರಿಂದ ಯಾವುದೇ ಫಲ ದೊರೆತರೂ ಅದು ಸಂಸ್ಥೆಗೆ ಸಲ್ಲುವುದಲ್ಲದೆ, ಸಂಸ್ಥೆಯ ಮುಖಾಂತರ ಬಡಬಗ್ಗರ ಸೇವೆ ನಡೆಸುತ್ತಿದ್ದೇವೆ. ಅಣೆಕಟ್ಟಿಗೆ ಹಲಗೆಯನ್ನು ಕಳೆದ ನವಂಬರ್ ತಿಂಗಳಲ್ಲೇ ಹಾಕಲಾಗಿದೆಯಾದರೂ, ಈ ಭಾಗಕ್ಕೆ ಮಣ್ಣು ತರುತ್ತಿದ್ದ ಪ್ರಮುಖ ರಸ್ತೆಯನ್ನು ತಮ್ಮ ಖಾಸಗಿ ರಸ್ತೆ ಎಂಬುದಾಗಿ ಹರೀಶ್ ಶೆಟ್ಟಿ ಮುಚ್ಚಿದ್ದರಿಂದ ಮತ್ತೊಂದು ಭಾಗದಲ್ಲಿ ರಸ್ತೆ ಸರಿಪಡಿಸಿಕೊಂಡು ಮಣ್ಣು ಸಾಗಿಸುವಾಗ ವಿಳಂಬವಾಗಿದೆ. ಅಣೆಕಟ್ಟು ಕಟ್ಟುವ ವಿಳಂಬಕ್ಕೆ ನಮ್ಮನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಹರೀಶ್ ಶೆಟ್ಟಿಯವರೇ ಕಾರಣ ವಿನಃ ಅನ್ಯರಲ್ಲ” ಎಂದರು.

ಈ ಬಗ್ಗೆ ಹರೀಶ್ ವಿರುದ್ಧ ಬೆಳ್ಮಣ್ ಗ್ರಾಮ ಪಂಚಾಯಿತಿ ಸಹಿತ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ ಎಂದರು. ಇದೀಗ ವರದಿಗೆ ಸ್ಪಂದಿಸಿದ ಬ್ರೇಟ್ ಗ್ರೂಪ್ ಸಂಸ್ಥೆ ಅಣೆಕಟ್ಟು ಕಟ್ಟುವ ಕಾರ್ಯ ಮುಗಿಸಿದ್ದು ಅಣೆಕಟ್ಟು ಭಾಗದಲ್ಲಿ ನೀರು ತುಂಬಿದ್ದರಿಂದ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.