ಹೆತ್ತವರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿ ಮನನೊಂದ ಪುತ್ರ ಬಾವಿಗೆ ಹಾರಿ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕ್ಷುಲ್ಲಕ ಕಾರಣಕ್ಕೆ ತಂದೆ, ತಾಯಿ ಮೇಲೆ ಹಲ್ಲೆ ನಡೆಸಿ ಬಳಿಕ ಮನನೊಂದ ಪುತ್ರ ಬೈಂದೂರು ಬಿಜೂರು ಗ್ರಾಮದ ದೀಟಿ ಮಹಾಲಿಂಗೇಶ್ವರ ದೇವಸ್ಥಾನ ಸಮೀಪದ ಉಡುಪರ ಹಾಡಿ ನಿವಾಸಿ ರಾಘವ ಪೂಜಾರಿ (32) ಮನೆ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಗನ ದೊಣ್ಣೆ ಏಟಿಗೆ ಗಂಭೀರ ಗಾಯಗೊಂಡಿರುವ ಮಂಜು ಪೂಜಾರಿ ಮತ್ತು ಹೆರಿಯಕ್ಕ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋಪಿ ರಾಘವ ಪೂಜಾರಿ ಹೊಟೇಲ್ ಉದ್ಯಮಿಯಾಗಿದ್ದು, ಮೂರು ವರ್ಷಗಳಿಂದ ಊರಲ್ಲೇ ನೆಲೆಸಿದ್ದ. ಆ 10ರಂದು ಧರ್ಮಸ್ಥಳಕ್ಕೆ ತೆರಳಿ ನಸುಕಿನ ಜಾವ 5 ಗಂಟೆಗೆ ಮರಳಿ ಮನೆಗೆ ಬಂದಿದ್ದ. ಮನೆ ಮಂದಿಯನ್ನು ಎಬ್ಬಿಸಲು ಬಾಗಿಲು ಬಡಿದಿದ್ದಾನೆ. ಆದರೆ ನಿದ್ದೆ ಮಂಪರಿನಲ್ಲಿದ್ದ ಪೋಷಕರು ತಡವಾಗಿ ಬಾಗಿಲು ತೆರೆದಿದ್ದಾರೆ. ಇದರಿಂದ ಆಕ್ರೋಶಗೊಂಡ ರಾಘವ ಮರದ ದೊಣ್ಣೆಯಿಂದ ತಂದೆ ಮಂಜು ಪೂಜಾರಿ ತಲೆಗೆ ಹೊಡೆದಿದ್ದಾನೆ. ಪತಿಯನ್ನು ರಕ್ಷಿಸಲು ಬಂದ ಹೆರಿಯಕ್ಕನ ಮೇಲೂ ಈತ ಹಲ್ಲೆ ನಡೆಸಿದ್ದಾನೆ. ತುಂಬಾ ಹೊತ್ತು ಹಲ್ಲೆ ಮಾಡಿದ್ದು, ಅವರೂ ಇಬ್ಬರೂ ರಕ್ತದ ಮಡುವಿನಲ್ಲಿ ಕುಸಿದು ಬಿದ್ದಿದ್ದಾರೆ. ಬಳಿಕ ಮನನೊಂದ ರಾಘವ ಪೂಜಾರಿ ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ. ಬೆಳಿಗ್ಗೆ 5ರಿಂದ 8.30ರ ನಡುವೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯವರು ಹಾಗೂ ಅಕ್ಕಪಕ್ಕದವರು ಹುಡುಕಾಡಿದಾಗ ರಾಘವ ಪೂಜಾರಿ ಶವ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ.