ಹೆತ್ತಬ್ಬೆ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲೆತ್ನಿಸಿದ ಮಗ, ಸೊಸೆ

ನಮ್ಮ ಪ್ರತಿನಿಧಿ ವರದಿ

ಬೆಳ್ತಂಗಡಿ : ಜಾಗದ ತಕರಾರಿನಲ್ಲಿ ಮಗ ಹೆತ್ತ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಹೇಯ ಕೃತ್ಯ ಕೊಯ್ಯೂರು ಗ್ರಾಮದಲ್ಲಿ ನಡೆದಿದೆ.  ಕೊಯ್ಯೂರು ಗ್ರಾಮದ ನೆಕ್ಕರೆಕೋಡಿ ಎಂಬಲ್ಲಿನ ನಿವಾಸಿ ಹರೀಶ್ ಗೌಡ ಎಂಬಾತನೇ ತನ್ನ ಹೆತ್ತ ತಾಯಿ ರಾಧಮ್ಮ (55) ಎಂಬವರ ಮೇಲೆ ಪೆಟ್ರೋಲು ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ.     ಆದಿತ್ಯವಾರ ರಾಧಮ್ಮ ಅವರು ತಮ್ಮ ಜಾಗದಲ್ಲಿ  ಜೆಸಿಬಿ ಮೂಲಕ  ಕೆಲಸ ಮಾಡಿಸುತ್ತಿದ್ದರು. ಇದೇ ಸಂದರ್ಭ ಕುಪಿತಗೊಂಡ ಮಗ ಹರೀಶ್ ಗೌಡ, ಮತ್ತು ಸೊಸೆ ದಿವ್ಯಪ್ರಭಾ ಸೇರಿಕೊಂಡು  ಪೆಟ್ರೋಲ್ ತುಂಬಿದ ಕ್ಯಾನ್ ತಂದು ರಾಧಮ್ಮ ಅವರನ್ನು ದೂಡಿ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದು ಇದೇ ವೇಳೆ ರಾಧಮ್ಮ ಜೀವ ಭಯದಲ್ಲಿ ಬೊಬ್ಬೆ ಹಾಕಿದಾಗ ಓಡಿ ಬಂದು ರಕ್ಷಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ ರಾಧಮ್ಮ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.