ಮಗನಿಗೆ ಮಲತಾಯಿ ಇಷ್ಟವಿಲ್ಲ

ಪ್ರ : ನಾನೊಬ್ಬ ಮಧ್ಯವಯಸ್ಕ. ನನ್ನ ಹೆಂಡತಿ ನಮ್ಮ ಮಗನಿಗೆ ಐದು ವರ್ಷವಿರುವಾಗಲೇ ತೀರಿಹೋದಳು. ಅವಳ ಮರಣಾನಂತರ ನಾನು ಒಂದು ವರ್ಷ ಮರುಮದುವೆಯ ಬಗ್ಗೆ ಯೋಚಿಸಿಯೇ ಇರಲಿಲ್ಲ. ಆದರೆ ನನ್ನ ತಾಯಿಗೂ ವಯಸ್ಸಾದ ಕಾರಣ ಮನೆ, ಮಗುವನ್ನು ನೋಡಿಕೊಳ್ಳಲು ನನಗೆ ಕಷ್ಟವಾಯಿತು. ಹಿತೈಷಿಗಳ ಮಾತಿಗೆ ಬೆಲೆ ಕೊಟ್ಟು ಮರುಮದುವೆಯಾದೆ. ಈಗ ಅವಳು ನನ್ನ ಮನೆ, ಮನ ತುಂಬಿದ್ದಾಳೆ. ಆದರೆ ನನ್ನ ಮಗನಿಗೆ ಅವಳನ್ನು ನೋಡಿದರೇ ಆಗುವುದಿಲ್ಲ. ಅವಳು ಒಳ್ಳೆಯವಳೇ. ಮನೆಯವರೆಲ್ಲರಿಗೂ ಪ್ರೀತಿ ತೋರಿಸುತ್ತಿದ್ದಾಳೆ. ಆದರೂ ನನ್ನ ಮಗ ಅವಳನ್ನು ದ್ವೇಷದಿಂದ ಕಾಣುತ್ತಾನೆ. ಅವಳ ಜೊತೆ ಒರಟಾಗಿ ನಡೆದುಕೊಳ್ಳುತ್ತಿದ್ದಾನೆ. ನಾನೆಂದರೆ ಅವನಿಗೆ ಪ್ರೀತಿ. ಅವಳು ನನ್ನ ಜೊತೆ ಇರುವುದನ್ನೂ ಅವನು ಸಹಿಸುವುದಿಲ್ಲ. ದಿನದಿಂದ ದಿನಕ್ಕೆ ಹಠಮಾರಿಯಾಗುತ್ತಿದ್ದಾನೆ. ಅವನ ತುಂಟಾಟಕ್ಕೆ ನಾವ್ಯಾರಾದರೂ ಗದರಿಸಿದರೆ ತನಗೇ ಏನಾದರೂ ಪೆಟ್ಟು ಮಾಡಿಕೊಳ್ಳುತ್ತಾನೆ. ಅವನನ್ನು ಯಾವ ರೀತಿಯಿಂದ ಅವನ ಹೊಸ ಅಮ್ಮನ ಜೊತೆ ಹೊಂದಿಕೊಳ್ಳುವಂತೆ ಮಾಡಲಿ?

: ನೀವು ಮರುಮದುವೆಯಾಗುವ ಮೊದಲು ನಿಮ್ಮ ಮಗನನ್ನು ಮಾನಸಿಕವಾಗಿ ಮೊದಲು ಸಿದ್ಧಪಡಿಸಬೇಕಿತ್ತು. ಮೊದಲೇ ತಾಯಿಯನ್ನು ಕಳೆದುಕೊಂಡ ಅವನು ಆಟೋಮ್ಯಾಟಿಕ್ ಆಗಿ ನಿಮ್ಮನ್ನು ಹಚ್ಚಿಕೊಂಡ. ನಿಮ್ಮಲ್ಲೇ ಅಮ್ಮನ ಪ್ರೀತಿಯನ್ನೂ ನಿರೀಕ್ಷಿಸಿದ. ಈಗ ನೀವು ಮರುಮದುವೆಯಾದ್ದರಿಂದ ನಿಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಮತ್ತೊಬ್ಬಳು ಬಂದಿದ್ದು ಅವನಿಗೆ ಸಹಿಸಿಕೊಳ್ಳಲು ಕಷ್ಟವಾಗಿದೆ. ನೀವು ಮೊದಲೇ ಅವನಿಗೆ ನಿಮ್ಮ ಹೆಂಡತಿಯಾಗಿ ಬರುವವಳನ್ನು ಪರಿಚಯಿಸಿ ಇಬ್ಬರ ಮಧ್ಯೆ ಬಾಂಧವ್ಯ ಬೆಸೆಯುವಂತೆ ನೋಡಿಕೊಂಡಿದ್ದರೆ ಹೀಗಾಗುತ್ತಿರಲಿಲ್ಲ. ನೀವು ಅವಳನ್ನು ನಿಮ್ಮ ಮನೆಗೆ ಕರೆತರುತ್ತಿರುವುದು ಅವನಿಗಾಗಿಯೇ ಅನ್ನುವ ಭಾವನೆ ಅವನಲ್ಲಿ ಮೂಡಿಸಿದ್ದರೆ ಅವನೂ ಅವಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಿದ್ದ. ಇನ್ನಾದರೂ ನೀವು ಈ ವಿಷಯವನ್ನು ನಿಮ್ಮ ಮಗನಿಗೆ ವಿವರಿಸಿ. ಅವಳಿರುವುದು ಅವನಿಗೋಸ್ಕರವೇ ಅನ್ನುವ ಭಾವನೆ ಅವನಿಗೆ ಮೊದಲು ಬರಲಿ. ನಿಮ್ಮ ಹೆಂಡತಿಗೂ ಯಾವ ಕಾರಣಕ್ಕೂ ಅವನ ಮೇಲೆ ಸಿಟ್ಟಾಗದೇ ತಾಳ್ಮೆಯಿಂದ ಇರಲು ಹೇಳಿ. ಕೆಲವೊಮ್ಮೆ ನಿಮ್ಮ ಎದುರಲ್ಲಿ ನಿಮ್ಮ ಮಗನನ್ನು ಆಕೆ ಒಳ್ಳೆಯ ರೀತಿಯಲ್ಲಿ ನೋಡಿಕೊಂಡ ನಾಟಕವಾಡಿದರೂ ನೀವಿಲ್ಲದಾಗ ಸವತಿಯ ಮಗ ಅಂತ ತಿರಸ್ಕಾರದಿಂದ ನೋಡುವ ಸಂಭವವೂ ಇರುತ್ತದೆ. ನೀವು ಆ ಬಗ್ಗೆಯೂ ಸೂಕ್ಷ್ಮವಾಗಿ ಪರೀಕ್ಷಿಸಿ. ನಿಮ್ಮ ಹೊಸ ಹೆಂಡತಿಗೆ ಎಲ್ಲ ಹುಡುಗಿಯರಿಗಿರುವಂತೆ ಗಂಡನ ಪ್ರೀತಿ ಸಂಪೂರ್ಣ ತನಗೆ ಬೇಕೆನಿಸುವುದು ಸಹಜವಾದರೂ ಆಕೆಯೀಗ ಮೊದಲು ನಿಮ್ಮ ಮಗುವಿಗೆ ಅಮ್ಮನಾಗಲೇ ಬೇಕು. ನಿಮ್ಮ ಮಗ ತನ್ನ ದಾಂಪತ್ಯದಲ್ಲಿ ಮುಳ್ಳು ಎಂದು ಭಾವಿಸಿ ಮಗನನ್ನು ತಿರಸ್ಕಾರದಿಂದ ನೋಡಿದರೆ ನಿಮ್ಮ ಮಗನೂ ಅವಳನ್ನು ಪ್ರೀತಿಯಿಂದ ಸ್ವೀಕರಿಸಲಾರ. ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಅವರು ಪ್ರೀತಿ ತೋರಿಸಿದರೆ ಹಚ್ಚಿಕೊಳ್ಳುವುದೂ ಬೇಗ. ಆದ್ದರಿಂದ ಈಗ ಎಲ್ಲವೂ ನಿಮ್ಮ ಹೆಂಡತಿಯ ಕೈಯಲ್ಲಿದೆ. ಅವನ ಮನಸ್ಸನ್ನು ಗೆಲ್ಲಲು ಎಲ್ಲಾ ಪ್ರಯತ್ನ ಆಕೆ ಮಾಡಲಿ. ತಾಯಿಯ ಮಮತೆ ನಿಮ್ಮ ಹೆಂಡತಿ ತೋರಿಸಿದರೆ ಇಂದಲ್ಲ ನಾಳೆ ಅವನೂ ಸರಿಹೋಗುತ್ತಾನೆ.