ವೃದ್ಧೆ ನಿಗೂಢ ಸಾವು : ಹಲವು ಶಂಕೆ ಮೂಡಿಸಿದ ಪುತ್ರ, ಸೊಸೆ ನಾಪತ್ತೆ

ಪುತ್ರ ಮುಸ್ತಫನೊಂದಿಗೆ ತಾಯಿ ಆಯಿಷಾಬಿ

ನಮ್ಮ ಪ್ರತಿನಿಧಿ ವರದಿ

ಮಂಜೇಶ್ವರ : ವೃದ್ಧೆಯೊಬ್ಬರ ಸಾವಿನಲ್ಲಿ ನಾನಾ ಅನುಮಾನ ಹುಟ್ಟಿಕೊಂಡಿದ್ದು, ಪುತ್ರ ಹಾಗೂ ಸೊಸೆಯಂದಿರು ಮನೆಗೆ ಬೀಗ ಜಡಿದು ನಾಪತ್ತೆಯಾಗಿದ್ದಾರೆ.

ಮೀಂಜ ತೊಟ್ಟೆತ್ತೋಡಿ ಬಳಿಯ ಚಿಗುರುಪದವು ನಿವಾಸಿ ದಿ ಆಲಿಕುಂಞ ಎಂಬವರ ಪತ್ನಿ ಆಯಿಷಾಬಿ (65)ಯವರ ನಿಧನದ ಬಗ್ಗೆ ನಿಗೂಢತೆ ಹುಟ್ಟಿಕೊಂಡಿದೆ. ಅಯಿಷಾಬಿ ಡಿ 5ರಂದು ಬೆಳಿಗ್ಗೆ 6 ಗಂಟೆಗೆ ಅವರ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಸಹಜ ಸಾವೆಂದು ಭಾವಿಸಿದ ಸಂಬಂಧಿಕರು ಅಂತ್ಯ ಸಂಸ್ಕಾರವನ್ನು ನೆರವೇರಿಸಿದ್ದರು. ಇದೇ ವೇಳೆ ಅಂತ್ಯಸಂಸ್ಕಾರಕ್ಕೆ ಮುಂಚಿತವಾಗಿ ಮೃತದೇಹಕ್ಕೆ ಸ್ನಾನ ಮಾಡಿಸುವ ಸಂದರ್ಭ ದೇಹದಲ್ಲಿ ಗಾಯಗಳಿರುವುದನ್ನು ಸಂಬಂಧಿಕ ಮಹಿಳೆಯರು ಕಂಡಿದ್ದರೆಂದು ತಿಳಿದುಬಂದಿದೆ. ಈ ಬಗ್ಗೆ ಅಲ್ಲಿ ಸೇರಿದ್ದ ಇತರರಲ್ಲಿ ತಿಳಿಸಿದ್ದು, ಅದು ಸಂಶಯಕ್ಕೆಡೆಮಾಡಿತ್ತು. ಅಲ್ಲಿ ಸೇರಿದವರು ಪೆÇಲೀಸರಿಗೂ ದೂರು ನೀಡಿದ್ದು, ಪೆÇಲೀಸರು ಮನೆಗೆ ಬಂದು ಸಂಬಂಧಿಕರನ್ನು ವಿಚಾರಿಸಿದಾಗ ಯಾರೂ ಲಿಖಿತವಾಗಿ ದೂರು ನೀಡಲು ಮುಂದೆ ಬಂದಿರಲಿಲ್ಲ. ಅನಂತರ ಮೃತದೇಹದ ದಫನ ಕಾರ್ಯ ನಡೆಸಲಾಗಿತ್ತು. ಆದರೆ ದಿನಗಳುರುಳುತ್ತಿದ್ದಂತೆ ಅಯಿಷಾಬಿ ಸಾವಿನ ಕುರಿತು ಕೆಲವು ಊಹಾಪೆÇೀಹಗಳು ಕೇಳಿಬರತೊಡಗಿದೆ.

ಮನೆಯ ಅಲ್ಪ ದೂರದಲ್ಲಿರುವ ಕಾಡಿನಲ್ಲಿ ಅಯಿಷಾಬಿಯ ಬಟ್ಟೆಬರೆ ಬಚ್ಚಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಲ್ಲದೆ ಮನೆಯಲ್ಲಿ ಪುತ್ರ ಹಾಗೂ ಸೊಸೆಯಂದಿರು ಹಲ್ಲೆಗೈಯ್ಯುತ್ತಿದ್ದ ಬಗ್ಗೆ ಆಯಿಷಾಬಿ ನಾಗರಿಕರಲ್ಲಿ ದೂರಿದ ಬಗ್ಗೆಯೂ ಹೇಳಲಾಗುತ್ತಿದೆ. ಆಯಿಷಾಬಿಯ ಪುತ್ರ ಮುಸ್ತಫನಿಗೆ ರುಕ್ಸಾನ ಹಾಗೂ ಫೌಸಿಯಾ ಎಂಬಿಬ್ಬರು ಪತ್ನಿಯರಿದ್ದು, ಇವರು ಮೀಯಪದವು ನಿವಾಸಿಗಳೂ ಸಹೋದರಿಯರೂ ಆಗಿದ್ದಾರೆ. ಅಲ್ಲದೆ ಇನ್ನೊಬ್ಬ ಸಹೋದರಿಯೂ ಇವರ ಜತೆಗೆ ವಾಸಿಸುತ್ತಿದ್ದಾರೆ.

ಡಿ 4ರಂದು ಅಸೌಖ್ಯದ ಹಿನ್ನೆಲೆಯಲ್ಲಿ ಆಯಿಷಾಬಿಯನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅಂದು ಆಸ್ಪತ್ರೆಗೆ ಬಂದ ಪುತ್ರ ತಾಯಿಯನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವುದಾಗಿ ತಿಳಿಸಿ ಬಲವಂತವಾಗಿ ಬಿಡುಗಡೆಗೊಳಿಸಿ ಮನೆಗೆ ಕರೆದೊಯ್ದಿದ್ದರೆಂದು ತಿಳಿದುಬಂದಿದೆ. ಅದರ ಮರುದಿನವೇ ಆಯಿಷಾಬಿ ಸಾವಿಗೀಡಾದ ಸ್ಥಿತಿಯಲ್ಲಿ ಮನೆಯಲ್ಲಿಪತ್ತೆಯಾಗಿದ್ದರು. ಇವರ ಸಾವಿನಲ್ಲಿ ಅನುಮಾನ ಹುಟ್ಟಿಕೊಂಡ ಹಿನ್ನೆಲೆಯಲ್ಲಿ ಮಂಜೇಶ್ವರದ ಮಾನವ ಹಕ್ಕು ಕಾರ್ಯಕರ್ತರೊಬ್ಬರು ಜಿಲ್ಲಾ ಪೆÇಲೀಸಧಿಕಾರಿಗೆ ದೂರು ನೀಡಿದ್ದಾರೆ. ಇದೀಗ ಆಯಿಷಾಬಿಯ ಮನೆ ಬೀಗ ಜಡಿದ ಸ್ಥಿತಿಯಲ್ಲಿದೆ.