ಬೆಳ್ಮ ರೆಂಜಾಡಿ ಕಸದ ಸಮಸ್ಯೆಗೆ ಮುಕ್ತಿಕೊಡಿ

ಅಭಿವೃದ್ಧಿ ಹೊಂದುತ್ತಿರುವ ಬೆಳ್ಮ ರೆಂಜಾಡಿ ಪಂಚಾಯತದಲ್ಲಿ ಸಮಸ್ಯೆಗಳು ದಿನೇ ದಿನೇ ಹೆಚ್ಚುತ್ತಿದೆ. ಇಲ್ಲಿನ ರೆಂಜಾಡಿ ಬಡಗಬೈಲಿನ ಕಸದ ಸಮಸ್ಯೆ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಮಾಡುತ್ತಿದೆ. ಕಸದ ರಾಶಿ ಸಮೀಪ ಹದ್ದು, ಕಾಗೆ, ನಾಯಿಗಳು ಸುತ್ತುವರಿದು ಕೊಳೆತ ಕೋಳಿ, ಮೀನಿನ ತ್ಯಾಜ್ಯಗಳನ್ನು ಜನ ಓಡಾಡುವ ರಸ್ತೆಯಲ್ಲಿ ತಂದುಹಾಕುತ್ತಿವೆ. ವಿಪರೀತ ವಾಸನೆಯಿಂದ ಅತ್ತಿತ್ತ ಹೋಗುವಾಗ ಉಸಿರುಗಟ್ಟುವ ವಾತಾವರಣ. ಕಾಗೆಗಳು ತ್ಯಾಜ್ಯಗಳನ್ನು ಕುಡಿಯುವ ನೀರಿನ ಬಾವಿಗೆ ತಂದು ಹಾಕುತ್ತಿವೆ. ಇದೇ ರೀತಿ ಮುಂದುವರಿದರೆ ಸಾಂಕ್ರಾಮಿಕ ರೋಗ ಹರಡಿ ಜನ ಆಸ್ಪತ್ರೆ ಸೇರುವುದು ಗ್ಯಾರಂಟಿ.
ಈ ಬಗ್ಗೆ ಪಂಚಾಯತ್ ಅಧ್ಯಕ್ಷರಲ್ಲಿ ಕೇಳಿದರೆ, ಒಬ್ಬರು ಇನ್ನೊಬ್ಬರತ್ತ ಕೈ ತೋರಿಸುತ್ತಾರೆ. ಮೋದಿಯವರ ಸ್ವಚ್ಛ ಭಾರತ ಈ ಪಂಚಾಯತದಲ್ಲಿ ಲೆಕ್ಕಕ್ಕಿಲ್ಲದಂತಾಗಿದೆ. ಜನರಿಂದ ಮತ ಪಡೆದು ಹೋದ ಜನಪ್ರತಿನಿಧಿಗಳಿಗೂ ಒಂದೂ ಚೂರು ಮರ್ಯಾದೆ ಇದ್ದರೆ ಲಾರಿಗಟ್ಟಲೆ ಕಸ ರಾಶಿ ಆಗಲು ಬಿಡದೇ ಎರಡು ದಿನಗಳಿಗೊಮ್ಮೆ ಕಸವನ್ನು ವಿಲೇವಾರಿ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಲು ಏನಡ್ಡಿ ? ಇದನ್ನು ಮಾಡಲಾಗದ ಸದಸ್ಯರಲ್ಲಿ ಜನ ಮತ್ತೇನು ನಿರೀಕ್ಷಿಸಲು ಸಾಧ್ಯ ? ಇಲ್ಲಿನ ಜನರ ತಾಳ್ಮೆ ಪರೀಕ್ಷಿಸುವುದು ಬೇಡ

  • ಕೆ ಹಸನಬ್ಬ  ಬೆಳ್ಮ