ಪಾಲಿಕೆ ಘನತ್ಯಾಜ್ಯ ನಿರ್ವಹಣಾ ಕಾರ್ಮಿಕರ ಪ್ರತಿಭಟನೆ

ಸಾಂದರ್ಭಿಕ ಚಿತ್ರ

ಕಸ ವಿಲೇವಾರಿಗೂ ನೋಟಿನ ಸಮಸ್ಯೆ

ವಿಶೇಷ ವರದಿ

ಮಂಗಳೂರು : ಕೇಂದ್ರ ಸರಕಾರದ ಹಳೆ ನೋಟುಗಳ ನಿಷೇಧ ಕ್ರಮ ನಗರದ ಘನತ್ಯಾಜ್ಯ ವಿಲೇವಾರಿ ಮೇಲೂ ಪ್ರತಿಕೂಲ ಪರಿಣಾಮ ಬೀರಿದ್ದು, ವೇತನ ಬಟವಾಡೆ ಆಗದಿರುವ ಪರಿಣಾಮ ಕಾರ್ಮಿಕರ ಮುಷ್ಕರ ನಡೆಸಿದ್ದಾರೆ.

ಪ್ರಮುಖವಾಗಿ ಕಸ ಸಾಗಾಟದ ವಾಹನಗಳ ಚಾಲಕರು ಕೆಲಸ ಮಾಡಲು ಒಪ್ಪದಿರುವ ಪರಿಣಾಮ ಮಂಗಳೂರು ನಗರದಲ್ಲಿ ಗುರುವಾರ ಕಸ ವಿಲೇವಾರಿ ಆಗಿಲ್ಲ.

ಮಂಗಳೂರು ಮಹಾನಗರಪಾಲಿಕೆ ಈಗಾಗಲೇ ಘನತ್ಯಾಜ್ಯ ವಿಲೇವಾರಿ ಮಾಡುವ ಆಂಟನಿ ವೇಸ್ಟ್ ಕಂಪೆನಿಗೆ ಹದಿನೇಳು ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತವನ್ನು ಬಾಕಿ ಇರಿಸಿಕೊಂಡಿದ್ದು ಪ್ರಮುಖ ಸಮಸ್ಯೆಯಾದರೆ, ಎರಡನೇ ಸಮಸ್ಯೆ ಕಾರ್ಮಿಕರಿಗೆ ವೇತನ ಬಟವಾಡೆ ಮಾಡಲು ನಗದು ಕೊರತೆ ಕಂಪೆನಿಗೆ ಎದುರಾಗಿದೆ.

ಹಳೆ ನೋಟುಗಳ ನಿಷೇಧದ ನಂತರ ಕಂಪೆನಿಯು ಕಾರ್ಮಿಕರ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದು ಹಣ ವರ್ಗಾಯಿಸಲು ಕ್ರಮ ಕೈಗೊಂಡಿದೆ. ಶೇಕಡಾ 90ರಷ್ಟು ಕಾರ್ಮಿಕರ ಬ್ಯಾಂಕ್ ಖಾತೆ ತೆರೆಯಲಾಗಿದ್ದು, ಇನ್ನುಳಿದ ಮಂದಿಯ ಖಾತೆ ತೆರೆಯುವ ಪ್ರತ್ರಿಕೆಯು ಪ್ರಗತಿಯಲ್ಲಿದೆ. ಬ್ಯಾಂಕುಗಳಲ್ಲಿ ಕೆಲಸದ ಒತ್ತಡದ ಪರಿಣಾಮ ಹೊಸ ಖಾತೆಗಳನ್ನು ತೆರೆಯಲು ವಿಳಂಬ ಆಗುತ್ತಿದೆ.

ಕಳೆದ ಕೆಲವು ತಿಂಗಳಿನಿಂದ ಮಹಾನಗರಪಾಲಿಕೆಯು ಘನತ್ಯಾಜ್ಯ ವಿಲೇವಾರಿ ಮಾಡುವ ಕಂಪೆನಿಗೆ ಕೋಟ್ಯಂತರ ರೂಪಾಯಿ ಬಾಕಿ ಇರಿಸಿಕೊಂಡಿದೆ. ಮಾತ್ರವಲ್ಲದೆ, ಕಳೆದ ವರ್ಷದ ಬಾಕಿ ಮೂರೂವರೆ ಕೋಟಿ ರೂಪಾಯಿ ಬಿಲ್ ಹಣವನ್ನು ಪಾಲಿಕೆ ಇದುವರಗೆ ಪಾವತಿಸಿಲ್ಲ ಎನ್ನಲಾಗಿದೆ.

ಪ್ರತಿತಿಂಗಳು ಕಂಪೆನಿಯ ಬಿಲ್ ಮೊತ್ತದಿಂದ ಶೇಕಡಾ 30ರಷ್ಟು ಕಡಿತ ಮಾಡಲಾಗುತ್ತಿದೆ. ಕಳೆದ ಫೆಬ್ರವರಿ ತಿಂಗಳಿನಿಂದ ಒಪ್ಪಂದ ಪ್ರಕಾರ ಗುತ್ತಿಗೆ ಮೊತ್ತ ಹೆಚ್ಚಳ ಮಾಡಬೇಕಾಗಿತ್ತು. ಸರಕಾರ ಈಗಾಗಲೇ ಕನಿಷ್ಟ ವೇತನವನ್ನು ಹೆಚ್ಚು ಮಾಡಿರುವುದರಿಂದ ಕಂಪೆನಿಗೆ ಹೆಚ್ಚುವರಿ ಹೊರೆಯಾಗಿದ್ದು, ಅದನ್ನು ಸರಿದೂಗಿಸಲು ಪಾಲಿಕೆ ಸಮ್ಮತಿ ನೀಡಿಲ್ಲ.

ಇವೆಲ್ಲದರ ಮಧ್ಯೆ, ಮಹಾನಗರಪಾಲಿಕೆ ನಿಯಮಿತವಾಗಿ ಬಿಲ್ ಪಾವತಿ ಮಾಡುತ್ತಿಲ್ಲ. ಮಾತ್ರವಲ್ಲದೆ, ಹಳೆ ಬಾಕಿಯನ್ನು ಕೂಡ ನೀಡುತ್ತಿಲ್ಲ ಎನ್ನುತ್ತಾರೆ ಕಂಪನಿ ವಕ್ತಾರರು.

ಕಳೆದ ತಿಂಗಳಿನಿಂದ ಹಳೆ ನೋಟುಗಳ ಅಮಾನ್ಯದಿಂದ ಕಾರ್ಮಿಕರಿಗೆ ನಗದು ರೂಪದಲ್ಲಿ ವೇತನ ನೀಡುವುದು ಆಂಟನಿ ವೇಸ್ಟ್ ಕಂಪೆನಿಗೆ ಸವಾಲಾಗಿದೆ. ಸಾಕಷ್ಟು ಪ್ರಮಾಣದಲ್ಲಿ ನಗದು ಲಭ್ಯತೆಯೂ ಇಲ್ಲ, ಪಾಲಿಕೆಯಿಂದ ಬಿಲ್ ಪಾವತಿ ಕೂಡ ಆಗುತ್ತಿಲ್ಲ.