ಜಿಲ್ಲೆಯ ಮಣ್ಣಿನಲ್ಲಿಲ್ಲ ಉತ್ಪಾದನಾ ಸಾಮಥ್ರ್ಯ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಸರ್ಕಾರಿ ಯೋಜನೆಯಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಮಣ್ಣಿನ ಆರೋಗ್ಯ ತಪಾಸಣಾ ಪ್ರಕ್ರಿಯೆ ಜಿಲ್ಲೆಯಾದ್ಯಂತದ ಕೃಷಿ ಭೂಮಿ ಉತ್ಪಾದನೆಗೆ ಬೇಕಾದ ಖನಿಜಾಂಶಗಳ ಕೊರತೆಯನ್ನು ಎದುರಿಸುತ್ತಿದೆ ಎಂಬ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದೆ.

ಹೌದು, ಜಿಲ್ಲೆಯ ಮಣ್ಣು ಬೋರ್ಯಾಕ್ಸ್, ಝಿಂಕ್ ಸಲ್ಫೇಟ್ ಮತ್ತು ಪೋಸ್ಪರಸ್ ಖನಿಜಾಂಶಗಳ ಕೊರತೆಯನ್ನು ಎದುರಿಸುತ್ತಿದೆ. ಹಾಗಾಗಿ ಜಿಲ್ಲೆಯ ಮಣ್ಣು ಉತ್ತಮ ಬೆಳೆಯನ್ನು ನೀಡಲು ಅಸಮರ್ಥವಾಗಿದೆ ಎಂದು ತಿಳಿದುಬಂದಿದೆ.

ಸಮರ್ಪಕ ಬೆಳೆಯ ಬೆಳೆಗೆ ಮಣ್ಣಿನಲ್ಲಿ 6.5ರಿಂದ 7.5ರಷ್ಟು ಪಿಎಚ್ ಮೌಲ್ಯವಿರಬೇಕು. ಆದರೆ ಜಿಲ್ಲೆಯ ಮಣ್ಣಿನಲ್ಲಿ ಪಿಎಚ್ ಮೌಲ್ಯ 6ಕ್ಕಿಂತಲೂ ಕಡಿಮೆ ಇದೆ. ಕಡಿಮೆ ಪ್ರಮಾಣದ ಬೊರ್ಯಾಕ್ಸ್, ಝಿಂಕ್ ಸಲ್ಫೇಟ್ ಮತ್ತು ಪಾಸ್ಪರಸ್ ಖನಿಜಾಂಶಗಳು ಕೂಡ ಬೆಳೆ ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.

“ಊಟಕ್ಕೆ ಉಪ್ಪಿನಕಾಯಿಯಂತೆ ರಾಸಾಯನಿಕ ಗೊಬ್ಬರಗಳನ್ನು ಬೆಳೆಗಳಿಗೆ ಬಳಸಬೇಕು. ಆದರೆ ಆಹಾರ ಬೆಳೆಗಳಿಗೆ ಸಾವಯವ ಗೊಬ್ಬರ ಮಾತ್ರ ಬಳಕೆಯಾಗಬೇಕು. ಜಿಲ್ಲೆಯಲ್ಲಿ ಇದು ಉಲ್ಟಾ ಹೊಡೆದಿದೆ” ಎಂದು ದಕ್ಷಿಣ ಕನ್ನಡ ಕೃಷಿ ಜಂಟಿ ನಿರ್ದೇಶಕ ಎಚ್ ಕೆಂಪೇಗೌಡ ಹೇಳಿದ್ದಾರೆ.

ಸಾವಯವ ಗೊಬ್ಬರ ಬಳಕೆಯನ್ನು ಶಿಫಾರಸ್ಸು ಮಾಡಿರುವ ಕೃಷಿ ಇಲಾಖೆಯು ಝಿಂಕ್ ಸಲ್ಫೇಟ್ ಮತ್ತು ಬೊರ್ಯಾಕ್ಸ್ ಮಿಶ್ರಿತ ಗೊಬ್ಬರಗಳನ್ನು ರಿಯಾಯಿತಿ ದರದಲ್ಲಿ ರೈತರಿಗೆ ಒದಗಿಸುತ್ತಿದೆ. ಮಣ್ಣಿನ ಪಿಎಚ್ ಮೌಲ್ಯವನ್ನು ಸಮತೋಲನದಲ್ಲಿಡಲು ರೈತರು ಪ್ರತಿ ಎಕ್ರೆಗೆ 200 ಕೇಜಿಯಂತೆ ಕೃಷಿ ಸುಣ್ಣವನ್ನು ಹಾಕಬೇಕು. ಒಂದು ವೇಳೆ ಪಿಎಚ್ ಮೌಲ್ಯ 6.5ರಿಂದ ಕಡಿಮೆ ಅಥವಾ 7.5ರಿಂದ ಹೆಚ್ಚು ಇದ್ದರೂ ಕೃಷಿಕರು ಬೆಳೆಗೆ ಹಾಕಿದ ಗೊಬ್ಬರವನ್ನು ಹೀರಿಕೊಳ್ಳಲು ಅಸಮರ್ಥವಾಗಿರುತ್ತದೆ. ಹಾಗಾಗಿ ಸಮತೋಲನ ಕಾಪಾಡಿಕೊಳ್ಳುವುದು ಅತ್ಯಂತ ಪ್ರಮುಖ ಅಂಶ ಎಂದು ಕೆಂಪೇಗೌಡ ತಿಳಿಸಿದ್ದಾರೆ.