ಅಸಹಾಯಕ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿ ನಂತರ ವಿಶ್ವಾಸದ ಮನೆ ಸೇರಿಸಿದ ನಿತ್ಯಾನಂದ

ನಾಗರಿಕ ಸಮಾಜದಲ್ಲಿ ಅಸಾಹಯಕ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ಇಬ್ಬರು ಹಿರಿಯ ಮಹಿಳೆಯರನ್ನು ವ್ಯವಸ್ಥಿತವಾಗಿ ಬದುಕಿನ ಸಂಧ್ಯಾಕಾಲ ಕಳೆಯಲು ಸಮಾಜಸೇವಕ ನಿತ್ಯಾನಂದ ಒಳಕಾಡು ಶಂಕರಪುರದ ವಿಶ್ವಾಸದ ಮನೆಗೆ ದಾಖಲಿಸಿದ್ದಾರೆ.
ಉಡುಪಿ ಕೃಷ್ಣಮಠದ ರಥಬೀದಿ ಪರಿಸರದಲ್ಲಿ ಜಾನಕಿ ಎನ್ನುವ ಸುಮಾರು 65 ವರ್ಷದ ಮಹಿಳೆ ಮಾನಸಿಕ ಖಿನ್ನತೆಯಿಂದಾಗಿ ಕಳೆದ 30 ವರ್ಷಗಳಿಂದ ಸುತ್ತಾಡಿಕೊಂಡಿದ್ದಳು. ಸ್ಥಳಿಯ ಅಂಗಡಿ ಮಾಲಿಕರು ನೀಡಿದ ತಿಂಡಿ ತಿನಿಸು ಸೇವಿಸಿ ಬದುಕು ಸಾಗಿಸಿಕೊಂಡಿದ್ದಳು. ಹಿಗೀರುವಾಗ ಜಾನಕಿ ರಾತ್ರೆ ಹೊತ್ತು ರಸ್ತೆ ಅಂಚಿನ ಚರಂಡಿಯಲ್ಲಿ ಬಿದ್ದು ಕಾಲಿಗೆ ಬಲವಾಗಿ ಗಾಯ ಮಾಡಿಕೊಂಡಿದ್ದಳು. ಆಕೆಯ ಚಿಂತಾಜನಕ ಪರಿಸ್ಥಿತಿ ಕಂಡು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇಕೆಗೆ ತನ್ನವರು ಎಂಬುವರು ಯಾರು ಇಲ್ಲ.
ಮತ್ತೊಂದು ಪ್ರಕರಣದಲ್ಲಿ ಉಡುಪಿ ಹೊರವಲಯದ ಅಮ್ಮುಂಜೆಯಲ್ಲಿ ಕಾಡಿನ ಮಧ್ಯೆ ಹಾಳು ಬಿದ್ದ ಮನೆಯಲ್ಲಿ ಅಸಹಾಯಕ ಪರಿಸ್ಥಿತಿಯಲ್ಲಿ ಸುಂದರಿ ಶೆಡ್ತಿ ಸುಮಾರು 70 ವರ್ಷದ ವೃದ್ಧೆ ಒಂಟಿ ಬದುಕು ಸಾಗಿಸುತ್ತಿದ್ದರು. ಈಕೆಯ ದಯನೀಯ ಸ್ಥಿತಿ ಕಂಡು ನೆರೆ ಮನೆಯ ಮಹಿಳೆಯೊಬ್ಬರು ಕಳೆದ ಮೂರು ವರ್ಷಗಳಿಂದ ಒಂದು ಹೊತ್ತಿನ ಊಟದ ವ್ಯವಸ್ಥೆಗೊಳಿಸಿದ್ದರು.
ಸುಂದರಿ ಶೆಡ್ತಿಯ ಮುಂದಿನ ವೃದ್ಯಾಪ ಬದುಕು ಕಷ್ಟಕರ, ಹಾಗಾಗಿ ಆಕೆಗೊಂದು ಸೂಕ್ತ ನೆಲೆ ಕಾಣಿಸಬೇಕೆಂದು ಯೋಚಿಸಿದ ಸ್ಥಳಿಯರಾದ ನಾಗೇಶ ಹೆಗ್ಡೆ ಅವರು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಪಂದಿಸಿದ ಒಳಕಾಡು ಅವರು ತಮ್ಮ ಅಂಬುಲೆನ್ಸ್ ಮುಖಾಂತರ ಸ್ಥಳಿಯರ ನೆರವು ಪಡೆದು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದರು.
ದೀರ್ಘ ಸಮಯದ ಚಿಕಿತ್ಸೆಗೆ ಸ್ಪಂದಿಸಿ ಗುಣಮುಖರಾದ ಜಾನಕಿ ಮತ್ತು ಸುಂದರಿ ಶೆಡ್ತಿ ಅವರ ವಾರಸುದಾರರ ಗಮನಕ್ಕೆಂದು ಮಾದ್ಯಮ ಪ್ರಕಟಣೆ ನೀಡಿಯೂ ಸಂಬಂಧಿಕರೆನ್ನುವರು ಯಾರೂ ಬಾರದ ಕಾರಣ ಮುಂದಿನ ಜೀವನ ಭದ್ರತೆಗಾಗಿ ಅಸಹಾಯಕ ಮಹಿಳೆಯರನ್ನು ಜಿಲ್ಲಾಸ್ಪತ್ರೆಯಿಂದ ನಿತ್ಯಾನಂದ ಒಳಕಾಡು ಅವರು ಬಿಡುಗಡೆಗೊಳಿಸಿ ಏ 17ರಂದು ಶಂಕರಪುರದ ವಿಶ್ವಾಸದ ಮನೆ ಅನಾಥಶ್ರಮಕ್ಕೆ ಸೇರಿಸಿದರು. ಈ ಸಂದರ್ಭ ಆಶ್ರಮದ ಉಸ್ತುವಾರಿಗಳಾದ ಮ್ಯಾಥ್ಯು, ಸುನೀಲ್ ಜೋಶ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಆಸ್ಪತ್ರೆಯಲ್ಲಿ ಹಿರಿಯ ಅಸಹಾಯಕ ಮಹಿಳೆಯರಿಗೆ ಮುತುವರ್ಜಿ ವಹಿಸಿ ದೀರ್ಘಕಾಲ ಚಿಕಿತ್ಸೆ ನೀಡಿ ಗುಣಪಡಿಸಿದ ಜಿಲ್ಲಾಸ್ಪತ್ರೆಯ ಹಿರಿಯ ವೈದ್ಯರುಗಳಾದ ಡಾ ಸುದೇಶ್ ಡಾ ನಾಗೇಶ್ ಮತ್ತು ಎಲ್ಲಾ ರೀತಿಯಲ್ಲಿ ಸಹಕಾರ ನೀಡಿದ ಆಸ್ಪತ್ರೆಯ ಸಿಬ್ಬಂದಿಗಳಾದ ವಿಮಲ ರಾಜಶ್ರೀ ಅಭಿನಂದನಾರ್ಹರು

  • ತಾರಾನಾಥ್ ಮೇಸ್ತ  ಉಡುಪಿ