ಕಾಲ್ತೋಡಿನಲ್ಲಿ ಸಮಾಜ ಕಲ್ಯಾಣ ಸಚಿವರ ಗ್ರಾಮ ವಾಸ್ತವ್ಯ ನಾಳೆ

ನಮ್ಮ ಪ್ರತಿನಿಧಿ ವರದಿ

ಉಡುಪಿ : ತಮ್ಮ ಗ್ರಾಮ ವಾಸ್ತವ್ಯದ ಮೂಲಕ ಹೆಸರುವಾಸಿಯಾಗುತ್ತಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್ ಆಂಜನೇಯ ಇದೀಗ ಜಿಲ್ಲೆಗೆ ಭೇಟಿ ನೀಡಿ ಗ್ರಾಮ ವಾಸ್ತವ್ಯ ಹೂಡಲಿದ್ದಾರೆ.

ಉಡುಪಿ ನಗರದಿಂದ 80 ಕಿ ಮೀ ದೂರದಲ್ಲಿರುವ ಬೈಂದೂರಿನ ಕಾಲ್ತೋಡು ಗ್ರಾಮದಲ್ಲಿ ಡಿ 31ರಂದು ಕೊರಗ ಸಮುದಾಯದವರ ಮನೆಯಲ್ಲಿ ಇವರ ಗ್ರಾಮವಾಸ್ತವ್ಯ ನಡೆಯಲಿದೆ. ಇಲ್ಲಿನ ಮೂರೂರು ಕೊರಗ ಕಾಲೊನಿಯಲ್ಲಿರುವ ಮರ್ಲಿ ಕೊರಗ ಎಂಬವರ ಮನೆಯಲ್ಲಿ ಇವರು ಒಂದು ರಾತ್ರಿ ತಂಗಲಿದ್ದಾರೆ.

ಸಚಿವರ ಗ್ರಾಮ ವಾಸ್ತವ್ಯದ ಕುರಿತು ರಾಜ್ಯ ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಅವರ ಉಪಸ್ಥಿತಿಯಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ ಜಿಲ್ಲೆಯ ಕೊರಗ ಸಮುದಾಯದ ಮುಖಂಡರ ಸಭೆ ನಡೆಸಿದರು.

ಕೊರಗರ ಕಲ್ಯಾಣಾಭಿವೃದ್ಧಿಗೆ ಆದ್ಯತೆ ನೀಡಿರುವ ಸಮಾಜ ಕಲ್ಯಾಣ ಸಚಿವ ಎಚ್ ಆಂಜನೇಯ, ಈಗಾಗಲೇ ಜಿಲ್ಲೆಯ ಕೊರಗರ ಅಭಿವೃದ್ಧಿ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಅಧಿಕಾರಿಗಳು ಕೊರಗರ ಕಲ್ಯಾಣಕ್ಕೆ ಇನ್ನಷ್ಟು ಆದ್ಯತೆ ನೀಡುವ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯಲ್ಲಿ ಕೊರಗ ಸಮುದಾಯದ ಜನಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ ಎಂದು ಸಚಿವರು ಆತಂಕ ವ್ಯಕ್ತಪಡಿಸಿದರು.

ಕೊರಗರಿಗೆ ಕಾಡುತ್ತಿರುವ ಅನಾರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾ ಸರ್ಜನ್ ಮತ್ತು ಮಣಿಪಾಲ ಯೂನಿವರ್ಸಿಟಿಯ ಸಾರ್ವಜನಿಕ ಆರೋಗ್ಯ ಇಲಾಖೆಯ ಅಧಿಕಾರಿಗಳ ಪ್ರತ್ಯೇಕ ಸಮಿತಿಯೊಂದನ್ನು ರಚಿಸಲು ನಿರ್ಧರಿಸಲಾಯಿತು.