`ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಭಿಕ್ಷೆಯಲ್ಲ, ಕಾನೂನುಬದ್ದ ಹಕ್ಕು’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : “ಸರಕಾರದ ಬೊಕ್ಕಸಕ್ಕೆ ಶೇ 60ರಷ್ಟು ಆದಾಯ ಅಸಂಘಟಿತ ಕಾರ್ಮಿಕರ ದುಡಿಮೆಯಿಂದ ಬರುತ್ತಿದೆ. ಹೀಗಿದ್ರೂ ಸರಕಾರಗಳು ಈ ವಿಭಾಗದ ಕಾರ್ಮಿಕರಿಗೆ ಸಾಮಾಜಿಕ, ಆರ್ಥಿಕ ಭದ್ರತೆ ಒದಗಿಸುವಲ್ಲಿ ಮೀನ ಮೇಷ ಎಣಿಸುತ್ತಿದೆ. ಆದರೆ ಸಾಮಾಜಿಕ ಭದ್ರತೆ ನಮ್ಮ ಕಾನೂನು ಬದ್ದ ಹಕ್ಕಾಗಿಸುವ ನಿಟ್ಟಿನಲ್ಲಿ ಕಾರ್ಮಿಕರು ಹೋರಾಟ ನಡೆಸಬೇಕಾದ ಅನಿವಾರ್ಯತೆಯಿದೆ” ಎಂದು ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ರಾಜ್ಯಾಧ್ಯಕ್ಷ ಕೆ ಮಹಾಂತೇಶ್ ಕರೆ ನೀಡಿದರು.

ಅವರು ನಗರದಲ್ಲಿ ಬಂದರು ಪ್ರದೇಶ ಮಟ್ಟದ ತಲೆಹೊರೆ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸಿಐಟಿಯು ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿ ಮಾತನಾಡಿ, “ಮೋದಿ ನೇತೃತ್ವದ ಕೇಂದ್ರ ಸರಕಾರ ನಿರಂತರವಾಗಿ ಕಾರ್ಮಿಕ ವರ್ಗದ ಮೇಲೆ ದಾಳಿ ನಡೆಸುತ್ತಾ ಬಂದಿದೆ. ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಕಾರ್ಮಿಕವರ್ಗ ಹಿಮ್ಮೆಟ್ಟಿಸಬೇಕಾಗಿದೆ” ಎಂದರು.

ಸಿಐಟಿಯು ದ ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಬಂದರು ಪ್ರದೇಶದಲ್ಲಿ ಕಾರ್ಮಿಕವರ್ಗದ ಮಧ್ಯೆ ಬಿರುಕು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಸ್ಥಾಪಿತ ಹಿತಾಸಕ್ತಿಗಳ ವಿರುದ್ಧ ಕಾರ್ಮಿಕವರ್ಗ ನಡೆಸಿದ ಹೋರಾಟಗಳನ್ನು ಮೆಲುಕು ಹಾಕಿದರು. ಅಧ್ಯಕ್ಷತೆಯನ್ನು ಬಂದರು ತಲೆಹೊರೆ ಕಾರ್ಮಿಕರ ಸಂಘದ ಅಧ್ಯಕ್ಷರಾದ ಅಹಮ್ಮದ್ ಬಾವಾ ವಹಿಸಿದ್ದರು.