ನಿಂದನೆಗೆ ವೇದಿಕೆಯಾದ ಸಾಮಾಜಿಕ ಜಾಲತಾಣ

ಮಾಹಿತಿ ತಂತ್ರಜ್ಞಾನದ ವರಪ್ರಸಾದ ಸಾಮಾಜಿಕ ಜಾಲತಾಣಗಳು ಸ್ಮಾರ್ಟ್ ಫೋನ್ ಮತ್ತು ಅಂತರ್ಜಾಲ ಸೌಲಭ್ಯ ಶ್ರೀಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ದೊರಕಲಾರಂಭಿಸಿದ ಮೇಲೆ ಫೇಸ್ಬುಕ್ ವಾಟ್ಸಪ್ ಟ್ವಿಟರ್ ಇನ್ನು ಮುಂತಾದ ಸಾಮಾಜಿಕ ಜಾಲತಾಣಗಳು ಜನಪ್ರಿಯವಾಗಿದೆ. ಒಂದು ಕಾಲದಲ್ಲಿ ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಪತ್ರಿಕೆ ಅಥವಾ ದೃಶ್ಯ ಮಾಧ್ಯಮದ ಮೊರೆ ಹೋಗಬೇಕಿದ್ದರೆ ಆದರೀಗ ಸಾಮಾಜಿಕ ಜಾಲತಾಣ ಪ್ರತಿಯೊಬ್ಬರಿಗೂ ತಮ್ಮ ವೈಯಕ್ತಿಕ ಅಭಿಪ್ರಾಯ ಅನಿಸಿಕೆ ವ್ಯಕ್ತಪಡಿಸಲು ಸದವಕಾಶ ಕಲ್ಪಿಸಿಕೊಟ್ಟಿವೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಾಭಿಪ್ರಾಯಕ್ಕೆ ಹೆಚ್ಚು ಮಹತ್ವವಿದೆ ಜನಪ್ರತಿನಿಧಿಗಳು ಆಡಳಿತಗಾರರು ಮತ್ತು ಗಣ್ಯ ವ್ಯಕ್ತಿಗಳು ತಮ್ಮ ಕಾರ್ಯವೈಖರಿ ಕುರಿತು ಜನರ ಅಭಿಪ್ರಾಯ ತಿಳಿಯಲು ಉತ್ಸುಕರಾಗಿರುತ್ತಾರೆ ಈ ನಿಟ್ಟಿನಲ್ಲಿ ಸಾಮಾಜಿಕ ತಾಣ ಜನಾಭಿಪ್ರಾಯ ಸಂಗ್ರಹಕ್ಕೆ ಉತ್ತಮ ಮಾರ್ಗ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ದುರುಪಯೋಗವಾಗುತ್ತಿರುವುದು ದುರಂತ. ಅವು ಪರಸ್ಪರ ನಿಂದನೆ ಮತ್ತು ಚಾರಿತ್ರ್ಯ ವಧೆ ಮಾಡುವ ವೇದಿಕೆಗಳಾಗುತ್ತಿವೆ. ಇವುಗಳ ಬಳಕೆದಾರರು ಶಿಕ್ಷಿತರೇ ಆಗಿದ್ದರೂ, ಅಶಿಕ್ಷಿತರಿಗಿಂತಲೂ ಕಡೆಯಾಗಿ ಅಲ್ಲಿ ಅಶ್ಲೀಲ, ಅಸಂವಿಧಾನಿಕ ಪದ ಧಾರಾಳ ಕಂಡು ಬರುತ್ತದೆ. ಇದು ಖಂಡಿತಕ್ಕೂ ಒಳ್ಳೆಯ ಬೆಳವಣಿಗೆ ಅಲ್ಲ. ವಿಷಯ ಮತ್ತು ಸಿದ್ಧಾಂತ ಕುರಿತು ಚರ್ಚಿಸುವ ಬದಲು ವ್ಯಕ್ತಿ ವೈಯಕ್ತಿಕ ವಿಷಯ ಕೆದಕಿ ತೇಜೋವಧೆ ಮಾಡುವ ಪರಿಪಾಠ ಹೆಚ್ಚಾಗಿದೆ. ವಿಮರ್ಶೆ ಒಳ್ಳೆಯದೇ. ಆದರೆ ಅದು ಆರೋಗ್ಯಕರವಾಗಿರಲಿ. ಒಳ್ಳೆಯ ಮಾತುಗಳಲ್ಲೇ ಕಠಿಣ ರೀತಿ ಟೀಕಿಸಲು ಸಾಧ್ಯವಿದೆ. ಟೀಕಿಸಲು ಕೆಟ್ಟ ಭಾಷೆ, ಪದಗಳೇ ಬೇಕೆಂದೇನಿಲ್ಲ. ವಚನಕಾರರು ತಮ್ಮ ವಚನಗಳಲ್ಲಿ ಡಾಂಭಿಕರನ್ನು ಒಳ್ಳೆಯ ಮಾತುಗಳಲ್ಲೇ ಎದೆಮುಟ್ಟಿ ನೋಡಿಕೊಳ್ಳುವಂತೆ ಬೈದಿರುವುದನ್ನು ಕಾಣಬಹುದು ಇತ್ತೀಚಿಗೆ ರಾಜಕೀಯ ಮತ್ತು ಧಾರ್ಮಿಕ ಹಿತಾಸಕ್ತಿಗಳಿಂದ ಕೂಡಿದ ಟ್ರೋಲುಗಳು ಹೆಚ್ಚಾಗುತ್ತಿವೆ. ಸುಳ್ಳು ಮಾಹಿತಿಗಳು, ಸುಳ್ಳು ಅಂಕಿ ಅಂಶಗಳು ಹಾಗೂ ಸೃಷ್ಟಿಸಿದ ಚಿತ್ರಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಯ ಬಿಡಲಾಗುತ್ತಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಜನಸಾಮಾನ್ಯರು ಅದನ್ನು ಮೆಚ್ಚುತ್ತಾರೆ. ಪ್ರತಿಕ್ರಿಯಿಸುತ್ತಾರೆ ಮತ್ತು ಹಂಚುತ್ತಾರೆ. ಜೊತೆಗೆ ಆರೋಪ ಪ್ರತ್ರ್ಯಾರೋಪಗಳಿಂದ ಕೂಡಿದ ಶೀತಲ ಸಮರವೇ ನಡೆದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ.
ಮಾತುಗಳು ನಮ್ಮ ಮನಸ್ಸಿನ ಕನ್ನಡಿ. ಮನಸ್ಸಿನಲ್ಲಿರುವುದು ಮಾತಿನ ಮೂಲಕ ವ್ಯಕ್ತವಾಗುತ್ತದೆ. ವ್ಯಕ್ತಿ ಮಾತುಗಳು ಶುದ್ಧವಾಗಿದ್ದರೆ ಆತನ ಮನಸ್ಸೂ ಶುದ್ಧವಾಗಿದೆ ಎನ್ನಬಹುದು. ಮಾತು ಕೆಟ್ಟದ್ದಾಗಿದ್ದರೆ ಮನಸ್ಸು ಕೆಟ್ಟಿದೆ ಎಂದೇ ಅರ್ಥ ನಾವು ಯಾರು ಎಂಥವರು ಎಂಬುದನ್ನು ನಮ್ಮ ಜಾಲತಾಣಗಳು ಹೇಳುತ್ತವೆ ಆದ್ದರಿಂದ ನಾವು ಎಂತಹ ಪೋಸ್ಟುಗಳನ್ನು ಹಾಕುತ್ತೇವೆ ಯಾವುದಕ್ಕೆ ಪ್ರತಿಕ್ರಿಯಿಸುತ್ತೇವೆ ಯಾವುದನ್ನು ಮೆಚ್ಚುತ್ತೇವೆ ಎಂದು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳುವುದು ಒಳ್ಳೆಯದು ಸಾಮಾಜಿಕ ಜಾಲತಾಣಗಳು ಅಂತರಾಳದ ಕಲ್ಮಶಗಳನ್ನು ಹೊರ ಹಾಕುವ ಕೊಚ್ಚೆಗುಂಡಿಯಲ್ಲ ಮನಸ್ಸಿನ ಕೋಪ ತಾಪಗಳನ್ನು ಕಕ್ಕುವ ಕಸದ ತೊಟ್ಟಿಯೂ ಅಲ್ಲ ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸೃಜನಶೀಲತೆಯನ್ನು ಬೆಳೆಸಿಕೊಳ್ಳಲು ಇಲ್ಲಿ ಸಾಕಷ್ಟು ಅವಕಾಶಗಳಿವೆ ಅಂತರಂಗ ಶುಚಿಯಾಗಿದ್ದರೆ ಅಭಿವ್ಯಕ್ತಿಯೂ ಶುಚಿಯಾಗಿರುತ್ತದೆ ಸಾಮಾಜಿಕ ಜಾಲತಾಣಗಳನ್ನು ಬಳಸುವವರಲ್ಲಿ ಯುವಕರೇ ಹೆಚ್ಚು ಈ ಬಿಸಿ ರಕ್ತದ ಯುವಕರಲ್ಲಿ ಭಾವನೆಗಳಿಗಿಂತ ಭಾವಾವೇಶವೇ ಜಾಸ್ತಿ ಯಾವುದೇ ವಿಷಯಗಳಿಗೆ ಪ್ರತಿಕ್ರಿಯಿಸುವ ಮುನ್ನ ತದನಂತರದ ಪರಿಣಾಮಗಳನ್ನು ಯೋಚಿಸಬೇಕು ಭಾಷಾ ಬಳಕೆಯಲ್ಲಿ ಸಂಸ್ಕಾರವಿರಬೇಕು ಸರಿ ತಪ್ಪುಗಳನ್ನು ತೂಗಿ ನೋಡಬೇಕು ಯುದ್ಧ ಮನುಷ್ಯನ ಮನಸ್ಸಿನಲ್ಲಿ ಹುಟ್ಟುತ್ತದೆಯಂತೆ ಈಗ ಸಾಮಾಜಿಕ ಜಾಲತಾಣಗಳು ಮನುಷ್ಯ ಮನುಷ್ಯರ ನಡುವೆ ದ್ವೇಷವನ್ನು ಹುಟ್ಟು ಹಾಕುತ್ತಿವೆ ಇದು ಮುಂದುವರಿದರೆ ಸಾಮಾಜಿಕ ಅಶಾಂತಿ ಮತ್ತು ವ್ಯಕ್ತಿತ್ವದ ಅಳಿವು ಉಂಟಾಗಬಹುದು

  • ಎಂ ಮನೋಹರ ಕೋಟ್ಯಾನ್
    ಕದ್ರಿ ಮಲ್ಲಿಕಟ್ಟೆ ಮಂಗಳೂರು