ಸೂರಲ್ಪಾಡಿ ಮಸೀದಿಯಿಂದ ಬಹಿಷ್ಕಾರ ತೆರವಿಗೆ ಹಕ್ಕು ಆಯೋಗ ಆದೇಶ

6 ವಾರದೊಳಗೆ ವರದಿ ಸಲ್ಲಿಸುವಂತೆ ಸೂಚನೆ 

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತಾಲೂಕಿನ ಸೂರಲ್ಪಾಡಿ ಕಿನ್ನಿಕಂಬಳದ ನೂರುಲ್ ಉಲೇಮಾ ಮದರಸ (ಮುಸ್ಲಿಂ ಪಂಥದ ಮಕ್ಕಳ ಪಾಠಶಾಲೆ) ಕುಟುಂಬವೊಂದಕ್ಕೆ ವಿಧಿಸಿದ ಸಾಮಾಜಿಕ ಬಹಿಷ್ಕಾರ ಮತ್ತು ಮಕ್ಕಳ ಧಾರ್ಮಿಕ ಶಿಕ್ಷಣ ಮೊಟಕುಗೊಳಿಸಿದ ಕ್ರಮವನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗ 6 ವಾರಗಳೊಳಗೆ ಬಹಿಷ್ಕಾರ ತೆರವು ಮತ್ತು ಮಕ್ಕಳಿಗೆ ಶಿಕ್ಷಣ ಮುಂದುವರಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ವ್ಯವಸ್ಥೆ ಮಾಡುವಂತೆ ರಾಜ್ಯ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಆದೇಶ ನೀಡಿದೆ.

ಸೂರಲ್ಪಾಡಿ ಕಿನ್ನಿಕಂಬಳ ಬೈತುಲ್-ಪಲಾಹ್ ನಿವಾಸಿ, ಪತ್ರಕರ್ತ ಬಾವಾ ಪದರಂಗಿ ಎಂಬವರು ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ನೀಡಿದ ದೂರಿನಂತೆ ಆಯೋಗ ಈ ಆದೇಶ ಹೊರಡಿಸಿದೆ. ಸುಮಾರು 3 ತಿಂಗಳ ಹಿಂದೆ ಬಾವಾ ಪದರಂಗಿಯವರ 6 ಮತ್ತು 12 ವರ್ಷದ ಇಬ್ಬರು ಮಕ್ಕಳು ಸೂರಲ್ಪಾಡಿ ಮದರಸದಲ್ಲಿ ಧಾರ್ಮಿಕ ಶಿಕ್ಷಣ ಪಡೆಯುತ್ತಿದ್ದು, ಈ ಸಂದರ್ಭ ಮಳೆ ಬರುತ್ತಿದ್ದರೂ ಮಕ್ಕಳನ್ನು ಹೊರಗಡೆ ಅಸೆಂಬ್ಲಿಗೆ ನಿಲ್ಲಿಸಿದ್ದನ್ನು ಬಾವಾ ಪದರಂಗಿ ಆಕ್ಷೇಪಿಸಿದ್ದರು ಮತ್ತು ಇದು ಮುಂದುವರಿದಲ್ಲಿ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸುವ ಎಚ್ಚರಿಕೆ ನೀಡಿದ್ದರು.