ವೃದ್ಧನಿಗೆ ನೆರವಾದ ಸಾಮಾಜಿಕ ಕಾರ್ಯಕರ್ತರು

ಉಡುಪಿ : ನಗರದಲ್ಲಿ ಅಸಹಾಯಕರಾಗಿ ಗಂಭೀರ ಸ್ಥಿತಿಯಲ್ಲಿದ್ದ, ಸುಮಾರು 70 ವರ್ಷದ ಅಪರಿಚಿತ ವೃದ್ಧರೊಬ್ಬರನ್ನು ಸಮಾಜಸೇವಕ ವಿಶುಶೆಟ್ಟಿ ಅಂಬಲಪಾಡಿಯವರು ಸೆಪ್ಟೆಂಬರ್ 25ರಂದು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದರು.

ವೃದ್ಧರು ತನ್ನ ಹೆಸರು ಮಂಜುನಾಥ ಶೇರಿಗಾರ್ ಬೈಂದೂರು ಪರಿಸರದವರೆಂದು ಹೇಳಿಕೊಂಡಿದ್ದರು. ವೃದ್ಧರು ನೀಡಿದ ಪೂರ್ವಾಪರದ ಮಾಹಿತಿಯೊಂದಿಗೆ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಂಬಂಧಿಕರ ಬರುವಿಕೆಗಾಗಿ ಪ್ರಕಟಣೆ ನೀಡಲಾಯಿತು. ಆದರೂ ವಾರಸುದಾರರು ಆಸ್ಪತ್ರೆಯನ್ನು ಸಂಪರ್ಕಿಸಲಿಲ್ಲ. ಈ ವಿಚಾರವಾಗಿ ಸಮಾಜಸೇವಕ ವಿಶು ಶೆಟ್ಟಿ, ಹಿರಿಯ ನಾಗರಿಕರ ಸಹಾಯವಾಣಿ ಅಧಿಕಾರಿ ನಿರಂಜನ ಭಟ್ ಅವರನ್ನು ಸಂಪರ್ಕಿಸಿ ವೃದ್ಧರಿಗೆ ಆಶ್ರಯ ನೀಡುವಂತೆ ವಿನಂತಿಸಿದ್ದರು.

ವಿನಂತಿಗೆ ಸ್ಪಂದಿಸಿದ ಅಧಿಕಾರಿ ಕುಂದಾಪುರದ ಚೈತನ್ಯ ವೃದ್ಧಾಶ್ರಮವನ್ನು ಸಂಪರ್ಕಿಸಿ, ಅಲ್ಲಿಂದ ಅನುಮತಿ ಪಡೆದಿದ್ದಾರೆ. ಗುಣಮುಖರಾದ ಮಂಜನಾಥ್ ಅವರನ್ನು ಜಿಲ್ಲಾಸ್ಪತ್ರೆಯಿಂದ ಅಕ್ಟೋಬರ್ 9ರಂದು ಬಿಡುಗಡೆಗೊಳಿಸಿ, ವಿಶು ಶೆಟ್ಟಿ ಅವರ ಖಾಸಗಿ ವಾಹದಲ್ಲಿ ಸಹಾಯವಾಣಿಯ ಕಾರ್ಯಕರ್ತರಾದ ಗಣೇಶ ಹಾಗೂ ಅವಿನಾಶ್ ಅವರ ಸಹಾಯದೊಂದಿಗೆ ಕುಂದಾಪುರದಲ್ಲಿರುವ ಚೈತನ್ಯ ವೃದ್ಧಾಶ್ರಮದಲ್ಲಿ ಜೀವನ ಸಂಧ್ಯಾ ಕಾಲ ಕಳೆಯಲು ಪುರ್ನವಸತಿ ಕಲ್ಪಿಸಿದರು.