ಹಾವು ಕಚ್ಚಿದ ಮಹಿಳೆ ಚಿಕಿತ್ಸೆ ಸಿಗದೇ ಸಾವು

????????????????????????????????????

ವೈದ್ಯರು, ಸಿಬ್ಬಂದಿ ನಿರ್ಲಕ್ಷ ್ಯ ಆರೋಪಿಸಿ ಕುಂದಾಪುರ  ಸರಕಾರಿ ಆಸ್ಪತ್ರೆ ಎದುರು ಪ್ರತಿಭಟನೆ, ಲಾಠಿಪ್ರಹಾರ

ನಮ್ಮ ಪ್ರತಿನಿಧಿ ವರದಿ

ಕುಂದಾಪುರ : ಕಳೆದ ಕೆಲವು ದಿನಗಳ ಹಿಂದೆಯಷ್ಟೆ ಗರ್ಭೀಣಿ ಮಹಿಳೆಯೊಬ್ಬರಿಗೆ ಹೆರಿಗೆ ನಿರಾಕರಿಸಿ ಸುದ್ದಿಯಾಗಿದ್ದ ಕುಂದಾಪುರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಇದೀಗ ಹಾವು ಕಚ್ಚಿ ಆಸ್ಪತ್ರೆಗೆ ಕರೆ ತಂದಿದ್ದ ಮಹಿಳೆಯೊಬ್ಬರಿಗೆ ಸೂಕ್ತ ಚಿಕಿತ್ಸೆ ನೀಡದ ನಿರ್ಲಕ್ಷ್ಯ ಆರೋಪದ ಮೂಲಕ ಮತ್ತೆ ಸುದ್ದಿಯಾಗುತ್ತಿದೆ.

ಪ್ರಕರಣದ ವಿವರ : ಸೋಮವಾರ ಬೈಂದೂರಿನ ಯೋಜನಾ ನಗರದ ವಿಶಾಲಾಕ್ಷೀ ಪೂಜಾರಿ (37) ಎನ್ನುವ ಮಹಿಳೆ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಸಮಯದಲ್ಲಿ 11.30ರ ವೇಳೆಯಲ್ಲಿ ವಿಷಪೂರಿತ ಹಾವು ಕಚ್ಚಿದೆ. ತಕ್ಷಣ ಹಾವು ಕಡಿದಿರುವ ಕೈಗೆ ಬಟ್ಟೆಯೊಂದರಲ್ಲಿ ಬಿಗು ಕಟ್ಟನ್ನು ಹಾಕಿ ಆಕೆಯನ್ನು ಬೈಂದೂರಿನ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. ಅಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು ನಮ್ಮಲ್ಲಿ ಹಾವು ಕಚ್ಚಿದ್ದಕ್ಕೆ ಸೂಕ್ತ ಔಷಧಿ ಇಲ್ಲದೆ ಇರುವುದರಿಂದ ಕುಂದಾಪುರ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳುವಂತೆ ಹೇಳಿ ವೈದ್ಯಾಧಿಕಾರಿಗಳಿಗೆ ಪತ್ರ ನೀಡಿ ಕಳುಹಿಸಿ ಕೊಟ್ಟಿದ್ದರು.

ಕುಂದಾಪುರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಯಿತು. ಈ ವೇಳೆ ಆಕೆಗೆ ತುರ್ತಾಗಿ ಚಿಕಿತ್ಸೆಯ ಅವಶ್ಯಕತೆ ಇದೆ ಎಂದು ಹೇಳಿದರೂ, ಕೇಳದ ಆಸ್ಪತ್ರೆಯವರು ಚಿಕಿತ್ಸೆಗೆ ನಿರ್ಲಕ್ಷ್ಯ ತೋರಿದ್ದರಿಂದಾಗಿ ಆಕೆ ಮೃತ ಪಟ್ಟಿದ್ದಾರೆ ಎನ್ನುವುದು ಮೃತರ ಸಂಬಂಧಿಕರ ಆರೋಪ.

ಆಸ್ಪತ್ರೆಯವರ ಯಾವುದೆ ನಿರ್ಲಕ್ಷ್ಯ ಇಲ್ಲ ಎಂದು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ ಉದಯಶಂಕರ ಸಮಜಾಯಿಕೆ ನೀಡಿದ್ದಾರೆ.

ಅಮಾನತಿಗೆ ಒತ್ತಾಯ : ಪ್ರಕರಣದಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಎನ್ನಲಾದ ವೈದ್ಯರನ್ನು ಹಾಗೂ ಸಿಬ್ಬಂದಿಗಳನ್ನು ಕೂಡಲೇ ಅಮಾನಾತುಗೊಳಿಸುವಂತೆ ಒತ್ತಾಯ ಮಾಡಿದ ವಿವಿಧ ಸಂಘಟನೆಯ ಪ್ರಮುಖರು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳ ಸೂಚನೆಯ ಮೇರೆಗೆ ಸ್ಥಳಕ್ಕೆ ಬಂದಿದ್ದ ತಹಶೀಲ್ದಾರ್ ಜಿ ಎಂ ಬೋರ್ಕರ್, ಬೈಂದೂರಿನ ವಿಶೇಷ ತಹಶೀಲ್ದಾರ್ ಕಿರಣ್ ಗೋರಯ್ಯ ಮೃತ ಮಹಿಳೆಯ ಕುಟುಂಬಿಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಆಸ್ಪತ್ರೆಯ ಸೀಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಸಂಗ್ರಹಿಸಿ ಇಡಲಾಗಿದೆ. ಮರಣೋತ್ತರ ಶವ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದೇಹವನ್ನು ಕಳುಹಿಸಲಾಗಿದೆ. ಆಸ್ಪತ್ರೆಯ ಒಳ ಆವರಣದಲ್ಲಿ ಜಮಾಯಿಸಿದ್ದ ಜನರನ್ನು ಹೊರಗೆ ಹೋಗಲು ವಿನಂತಿಸಿದ ಪೊಲೀಸರು, ಬಗ್ಗದೆ ಇದ್ದಾಗ ಲಘು ಲಾಠಿ ಪ್ರಹಾರ ನಡೆಸಿ, ಜನರನ್ನು ಚದುರಿಸಿದ್ದಾರೆ.