ಬೋರುಗುಡ್ಡೆ ಜನರಿಗೆ ಕೆಸರು ಭಾಗ್ಯ

ನಮ್ಮ ಪ್ರತಿನಿಧಿ ವರದಿ

ಮೂಡುಬಿದಿರೆ : ಬೇಸಿಗೆ ಕಾಲದಲ್ಲಿ ಧೂಳು ಭಾಗ್ಯ, ಮಳೆಗಾಲದಲ್ಲಿ ಕೆಸರು ಭಾಗ್ಯ. ಇದು ಬೋರುಗುಡ್ಡೆ ಪರಿಸರದ ನಿವಾಸಿಗಳು ನಿತ್ಯ ಅನುಭವಿಸುತ್ತಿರುವ ಬವಣೆ.

ಪಿಡಬ್ಲ್ಯುಡಿ ಇಲಾಖೆ ರಸ್ತೆ ಬದಿ ಉದ್ದಕ್ಕೂ ಮಣ್ಣು ಹಾಕಿದ್ದೆ ಜನರ ಸಮಸ್ಯೆಗೆ ಕಾರಣವಾಗಿದೆ. ಮೂಡುಬಿದಿರೆಯಿಂದ ಶಿರ್ತಾಡಿವರೆಗೆ ದ್ವಿಪಥ ರಸ್ತೆಯಾದರೆ ಶಿರ್ತಾಡಿಯಿಂದ ಹೊಸ್ಮಾರಿನವರೆಗೆ ಏಕಪಥ ರಸ್ತೆಯಾಗಿದೆ. ಇಕ್ಕಟ್ಟಾದ ರಸ್ತೆಯಲ್ಲಿ ಒಂದು ವಾಹನ ಇನ್ನೊಂದು ವಾಹನಕ್ಕೆ ಜಾಗಕೊಡಲು ರಸ್ತೆ ಪಕ್ಕಕ್ಕೆ ಬಂದಾಗ ಆ ಪರಿಸರ ಕೆಸರುಮಯವಾಗಲು ಶುರುವಾಗುತ್ತದೆ. ಮಳೆಬಂತೆಂದರೆ ಸಮಸ್ಯೆ ಉಲ್ಬಣವಾಗುತ್ತಿದೆ. ಬೋರುಗುಡ್ಡೆ ಪರಿಸರದಲ್ಲಿ ನಿತ್ಯ ಇದೇ ಸಮಸ್ಯೆ.

ಇಲ್ಲಿ ರಸ್ತೆ ಬದಿಯಲ್ಲು ಕೆಸರು, ರಸ್ತೆ ಮೇಲು ಕೆಸರು. ಎಲ್ಲೆಲ್ಲು ಕೆಸರುಮಯವಾಗಿರುವುದರಿಂದ ಜನ ಸಂಚಾರ ದುಸ್ತರವಾಗಿದೆ. ರಸ್ತೆ ಬದಿಯಲ್ಲಿ ನಡೆದು ಹೋಗುವವನಿಗೆ ನಿತ್ಯ ಕೆಸರಿನ ಸಿಂಚನ. ಇದರಿಂದ ಅಂಗಡಿಗೆ ಬರುವ ಗಿರಾಕಿಗಳಿಗು ತೊಂದರೆ. ಶಾಲಾ ಮಕ್ಕಳು, ಸಾರ್ವಜನಿಕರು ಬಸ್ ಹತ್ತುವಾಗ, ಇಳಿಯುವಾಗ ಕೆಸರು ತಪ್ಪಿಸಲು ಹರಸಾಹಸ ಪಡಬೇಕಾಗಿದೆ. ಒಂದೆರಡು ಬಸ್ಸುಗಳ ಚಕ್ರ ಹೂತು ಹೋಗಿತ್ತು. ರಸ್ತೆಯ ಕೆಸರಿನ ನೀರಿನ ಮೇಲೆ ಚಲಿಸಿದ ಕೆಲ ದ್ವಿಚಕ್ರ ವಾಹನಗಳು ಪಲ್ಟಿ ಹೊಡೆದು ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ರಸ್ತೆ ಅಗಲೀಕರಣವಾಗಿಲ್ಲ

ಮೂಡುಬಿದಿರೆಯಿಂದ ಶಿರ್ತಾಡಿ ವರೆಗಿನ ರಸ್ತೆ ದ್ವಿಪಥ ರಸ್ತೆಯಾಗಿ ಪರಿವರ್ತನೆಗೊಂಡಿದೆ. ಶಿರ್ತಾಡಿ-ಹೊಸ್ಮಾರು ರಸ್ತೆ ಕೂಡ ದ್ವಿಪಥ ರಸ್ತೆಯಾಗಿ ಪರಿವರ್ತನೆಗೊಳಿಸಲಾಗುವುದು ಎಂದು ಶಾಸಕ ಅಭಯಚಂದ್ರ ಜೈನ್ ಸಾರ್ವಜನಿಕ ಸಭೆಗಳಲ್ಲಿ ಭರವಸೆ ನೀಡಿದ್ದಾರೆ. ಅವರ ಮಾತು ಇನ್ನೂ ಈಡೇರಿಲ್ಲ. ಇದರಿಂದ ಬೋರುಗುಡ್ಡೆ ರಸ್ತೆ ಕೆಸರುಮಯವಾಗಿದೆ. ಜನ ಸಮಸ್ಯೆ ಅನುಭವಿಸುವಂತಾಗಿದೆ ಎಂದು ನೆಲ್ಲಿಕಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಂತ್ ಹೆಗ್ಡೆ ಆರೋಪಿಸಿದ್ದಾರೆ.

ಒಂದೊ ರಸ್ತೆ ಬದಿ ಹಾಕಿದ ಮಣ್ಣನ್ನು ತೆಗಿಯಲಿ. ಇಲ್ಲದಿದ್ದರೆ ಅದರ ಮೇಲೆ ಜಲ್ಲಿಹುಡಿ ಹಾಗೂ ಗಟ್ಟಿ ಕಲ್ಲು ಮಿಕ್ಸ್ ಮಾಡಿದರೆ ಮಳೆಗಾಲದಲ್ಲಿ ಜನ ಕೆಸರಿನ ಸಮಸ್ಯೆಯಿಂದ ಪಾರಾಗಬಹುದು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.