ಕಳವು ಕೃತ್ಯಗಳಿಗೆ ನರೇಶ್ ಶೆಣೈಯನ್ನು ಹೊಣೆಯಾಗಿಸಿದ್ದ ವಿನಾಯಕ್ ಬಾಳಿಗಾ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ತನ್ನ ಮನೆ ಮುಂಭಾಗದಲ್ಲೇ ದುಷ್ಕರ್ಮಿಗಳಿಂದ ಅಮಾನುಷವಾಗಿ ಹತ್ಯೆಗೀಡಾಗಿದ್ದ ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗಾ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈನನ್ನು ಕಳವು ಕೃತ್ಯಗಳಿಗೆ ಸಂಬಂಧಿಸಿದಂತೆ ವಿನಾಯಕ ಬಾಳಿಗಾ ಆರೋಪಿಯನ್ನಾಗಿಸಿದ್ದ ಎನ್ನುವ ಮಾಹಿತಿ ಚಾರ್ಜಶೀಟಿನಲ್ಲಿ ದಾಖಲಿಸಲಾಗಿದೆ.

ತಾನು ಹತ್ಯೆಗೀಡಾಗುವ ಮುನ್ನ ನಗರದ ಸುಧಾ ಸೇವಾ ಪ್ರತಿಷ್ಠಾನದ ಟ್ರಸ್ಟಿಗಳಿಗೆ ಪತ್ರ ಬರೆದಿದ್ದ ವಿನಾಯಕ ಬಾಳಿಗಾ, “ನರೇಶ್ ಶೆಣೈ ಮತ್ತು ಆತನ ಕುಟುಂಬಿಕರು ವಿಠೋಬಾ ದೇವಸ್ಥಾನದಲ್ಲಿ ನಡೆದ ಕಳವು ಕೃತ್ಯಗಳಲ್ಲಿ ಶಾಮೀಲಾಗಿದ್ದಾರೆ. ಅಲ್ಲದೆ ನರೇಶ್ ಶೆಣೈ ಇತರ ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಆರೋಪಿಗಳಾಗಿರುವರಿಗೆ ಸಹಕಾರ ನೀಡಿದ್ದ” ಎಂದು ತಿಳಿಸಿದ್ದರು.

ಮಾ 21ರಂದು ಕೊಡಿಯಾಲಬೈಲ್ ನಿವಾಸದ ಬಳಿ ನಡೆದಿದ್ದ ವಿನಾಯಕ ಬಾಳಿಗಾ ಕೊಲೆ ಕೃತ್ಯಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಚಾರ್ಜಶೀಟ್ ಸಲ್ಲಿಸಲಾಗಿದ್ದು, ವಿನಾಯಕ ಬಾಳಿಗಾ ಬರೆದಿದ್ದ ಈ ಪತ್ರದ ಒಕ್ಕಣೆಯನ್ನು ಉಲ್ಲೇಖಿಸಲಾಗಿದೆ. ಕೊಲೆ ಕೃತ್ಯದ ತನಿಖಾಧಿಕಾರಿ ಉದಯ್ ನಾಯಕ್ ತಾವು ಮಂಗಳೂರಿನ ಮೂರನೇ ಜೂಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಾಥಮಿಕ ಚಾರ್ಜಶೀಟಿನಲ್ಲಿ ಈ ಅಂಶಗಳನ್ನು ದಾಖಲಿಸಿದ್ದಾರೆ.

ಪ್ರತಿಷ್ಠಾನದ ಸಂಚಾಲಕರು ಹಾಗೂ ಸದಸ್ಯರಾಗಿರುವ ಅನಿಲ್ ಕುಡ್ವಾ ಮತ್ತು ಗಣಪತಿ ಪೈ ಎಂಬವರಿಗೆ ವಿನಾಯಕ ಬಾಳಿಗಾ ಪತ್ರ ಬರೆದಿದ್ದರು. ನರೇಶ್ ಶೆಣೈ, ಅವರ ತಂದೆ ಹಾಗೂ ಇತರ ಕೆಲವು ಮಂದಿ ವಿಠೋಬಾ ರುಕ್ಮಯಿ ದೇವಸ್ಥಾನದ ಟ್ರಸ್ಟಿಗಳ ಹೆಸರಿನಲ್ಲಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕಿನಲ್ಲಿ ಇರಿಸಲಾಗಿದ್ದ ದೇವಸ್ಥಾನದ ಚಿನ್ನಾಭರಣಗಳನ್ನು 2013ರಲ್ಲಿ ಕಳವು ಮಾಡಿದ್ದರು ಎಂದು ತಿಳಿಸಿದ್ದರು.

ವಿಠೋಬಾ ದೇವಾಲಯದಲ್ಲಿ ವ್ಯಾಪಕ ಅವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಹಕ್ಕಿನಡಿ ದಾಖಲೆಗಳನ್ನು ಪಡೆದುಕೊಂಡಿದ್ದ ವಿನಾಯಕ ಬಾಳಿಗಾ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಇಳಿದಿದ್ದರು.