`ಅಕ್ರಮ ಸಕ್ರಮಕ್ಕೆ ಸ್ಲ್ಯಾಬ್ ಸಿಸ್ಟಂ ಅಳವಡಿಕೆ ಸೂಕ್ತ’

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಿಯಮ ಉಲ್ಲಂಘಿಸಿ ನಿರ್ಮಾಣಗೊಂಡಿರುವ ಕಟ್ಟಡಗಳನ್ನು ರಾಜ್ಯ ಸರಕಾರವು ಇದೀಗ ಅಕ್ರಮ ಸಕ್ರಮದಡಿ ಕ್ರಮಬದ್ಧಗೊಳಿಸಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಸ್ಲ್ಯಾಬ್ ಸಿಸ್ಟಂ ಅಳವಡಿಸುವುದು ಹೆಚ್ಚು ಸೂಕ್ತವಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕೆ ಸಲಹೆಗಾರ ಧರ್ಮರಾಜ್ ಸಲಹೆ ನೀಡಿದ್ದಾರೆ.

ರಾಜ್ಯ ನಗರಾಭಿವೃದ್ಧಿ ಸಚಿವ ರೋಶನ್ ಬೇಗ್ ಮಂಗಳೂರು ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನೆಯನ್ನು ಶನಿವಾರ ಪಾಲಿಕೆ ಸಭಾಂಗಣದಲ್ಲಿ ನಡೆಸಿದ ಸಂದರ್ಭ ಅವರು ತಮ್ಮ ಸಲಹೆ ನೀಡಿದರು.

“ಸ್ಲ್ಯಾಬ್ ಸಿಸ್ಟಂ ಅಳವಡಿಸುವ ಮುನ್ನ ಈ ವ್ಯವಸ್ಥೆಯ ಬಗ್ಗೆ ನಗರಾಭಿವೃದ್ಧಿ ಇಲಾಖೆ ಜೊತೆಗೆ ಸಮಗ್ರವಾಗಿ ಚರ್ಚಿಸುವುದು ಸೂಕ್ತ. ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲ್ಯಾನಿಂಗ್ ಕಾಯ್ದೆ ಪ್ರಕಾರ ಸೆಕ್ಷನ್ 76(ಎಫ್)ನಡಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಅತ್ಯಂತ ಎಚ್ಚರಿಕೆಯಿಂದ ಮತ್ತು ಪಾರದರ್ಶಕತೆಯಿಂದ ಇದನ್ನು ನಿರ್ವಹಿಸಬೇಕಾದ ಅಗತ್ಯವಿದೆ ಎಂದವರು ಸಲಹೆ ನೀಡಿದ್ದಾರೆ. ಪ್ರಸ್ತುತ ಇರುವ ನಿಯಮದಂತೆ ಬೆಂಗಳೂರಿನಲ್ಲಿ ಶೇ 90ರಷ್ಟು ಅಕ್ರಮ ಕಟ್ಟಡಗಳು ಇನ್ನೂ ಕ್ರಮ ಬದ್ಧಗೊಳಿಸಲಾಗಿಲ್ಲ” ಎಂದರು.

“ಮಂಗಳೂರಿನಲ್ಲಿ ಕೂಡಾ ನಿಯಮ ಉಲ್ಲಂಘಿಸಿ ಕಟ್ಟಲಾಗಿರುವ ಬಹಳಷ್ಟು ಕಟ್ಟಡಗಳು ಇವೆ. ಇವುಗಳನ್ನು ಕ್ರಮ ಬದ್ಧಗೊಳಿಸಲು ಕೂಡಾ ಕಾನೂನಿನ ತೊಡಕುಗಳಿವೆ. ಆದರೆ ಇವುಗಳನ್ನು ಕ್ರಮ ಬದ್ಧಗೊಳಿಸುವ ಸಂದರ್ಭದಲ್ಲಿ ವಿಧಿಸಲಾಗುವ ದಂಡದ ಪ್ರಮಾಣದಲ್ಲಿ ಸಣ್ಣ ಹಾಗೂ ಮಧ್ಯಮ ವರ್ಗದ ಮನೆ ಮಾಲಕರು ಕಷ್ಟಕ್ಕೊಳಗಾಗಲಿದ್ದಾರೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಅಕ್ರಮ ಸಕ್ರಮ ಸಿಸ್ಟಂ ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಸ್ಲ್ಯಾಬ್ ಸಿಸ್ಟಂ ಅಳವಡಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದರು. ಆಂಧ್ರ ಪ್ರದೇಶ ಸೇರಿದಂತೆ ಹಲವು ರಾಜ್ಯಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಏಕಕಾಲಕ್ಕೆ ಅಕ್ರಮವನ್ನು ಸಕ್ರಮ ಮಾಡುವ ಒಂದೇ ಮಾದರಿಯ ರೀತಿ ಅಳವಡಿಸುವುದು ಹೆಚ್ಚು ಸೂಕ್ತ ಎಂದವರು ಹೇಳಿದ್ದಾರೆ.