ಅಡಿಗಲ್ಲು ಹಾಕಿ ಮೂರೂವರೆ ತಿಂಗಳಾದರೂ ಸ್ಕೈವಾಕ್ ಕಾಮಗಾರಿ ಇನ್ನೂ ಆರಂಭವಾಗಿಲ್ಲ !

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ಮಂಗಳೂರಿನ ಪಾದಚಾರಿಗಳ ಬಹುನಿರೀಕ್ಷೆಯ ಸ್ಕೈವಾಕ್ ನಿರ್ಮಾಣ ಯೋಜನೆ ಇನ್ನೂ ಪ್ರಾರಂಭದ ಭಾಗ್ಯವನ್ನೇ ಪಡೆದಿಲ್ಲ.

ಒಂದೆಡೆಯಲ್ಲಿ ಸ್ಕೈವಾಕ್ ರಚನೆಯ ವಿನ್ಯಾಸ ಇನ್ನೂ ಸಿದ್ಧವಾಗಿಲ್ಲ ಎಂಬ ಕಾರಣ ಕೇಳಿಬರುತ್ತಿದ್ದರೆ, ಇನ್ನೊಂದೆಡೆಯಲ್ಲಿ ಹಣ ಕೊರತೆ ಕಾರಣ ಎಂದು ಹೇಳಲಾಗುತ್ತಿದೆ.

skywalk

ನಗರದ ಟೌನ್‍ಹಾಲ್ ಸಮೀಪದಿಂದ ಇನ್ನೊಂದು ಬದಿಯಲ್ಲಿ ಮಿನಿವಿಧಾನ ಸೌಧ ಸಮೀಪಕ್ಕೆ ಸಂಪರ್ಕಿಸುವಂತೆ ನಿರ್ಮಿಸಲುದ್ದೇಶಿಸಿರುವ ಸ್ಕೈವಾಕ್ ಯೋಜನೆಗೆ ಕರ್ನಾಟಕ ಕರಾವಳಿ ಅಭಿವೃದ್ದಿ ಪ್ರಾಧಿಕಾರ (ಕೆಸಿಡಿಎ) ಈ ವರ್ಷದ ಆಗಸ್ಟ್ 23 ರಂದು ಶಂಕುಸ್ಥಾಪನೆ ನೆರವೇರಿಸಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟರಲ್ಲಿ ಸ್ಕೈವಾಕ್ ಜನ ಸೇವೆಗೆ ಲಭ್ಯವಿರುತ್ತಿತ್ತು.

ಅತ್ಯಂತ ಹೆಚ್ಚಿನ ಜನ ಸಮೂಹದ ಸ್ಥಳವೆಂದು ಕೆಸಿಡಿಎ ಮಾಜಿ ಅಧ್ಯಕ್ಷ ನಿವೇದಿತ್ ಆಳ್ವ ಸ್ಕೈವಾಕ್ ರಚನೆಗೆ ಈ ಸ್ಥಳವನ್ನು ಆರಿಸಿದ್ದರು. ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣದಿಂದ ಬರುವ ಪ್ರಯಾಣಿಕರು ನಗರ ಬಸ್ಸುಗಳನ್ನು ಹಿಡಿಯಲು ಇದೇ ಸ್ಥಳದಲ್ಲಿ ರಸ್ತೆ ದಾಟುತ್ತಿದ್ದು, ಅತ್ಯಂತ ವೇಗವಾಗಿ ವಾಹನಗಳು ಚಲಿಸುವ ಈ ಪ್ರದೇಶ ರಸ್ತೆ ದಾಟುವ ಪಾದಚಾರಿಗಳಿಗೆ ಅಪಾಯಕಾರಿ ಎಂದು ಇಲ್ಲಿ ಸ್ಕೈವಾಕ್ ನಿರ್ಮಾಣಕ್ಕೆ ನಿರ್ಧರಿಸಲು ಕಾರಣ.  ಯೋಜನೆಯ ಅಂದಾಜು ವೆಚ್ಚ ರೂ 1.56 ಕೋಟಿ. ಸ್ಕೈವಾಕ್ ನಿರ್ಮಾಣ ಕೆಲಸವನ್ನು ನಿರ್ಮಿತಿ ಕೇಂದ್ರಕ್ಕೆ ವಹಿಸಲಾಗಿದೆ.

ಕರ್ನಾಟಕ ಕರಾವಳಿ ಅಭಿವೃದ್ದಿ ಪ್ರಾಧಿಕಾರವು ರೂ 78 ಲಕ್ಷ ನೀಡಲಿದೆ. ಮನಪಾವು ಯೋಜನೆಯ ಒಟ್ಟು ವೆಚ್ಚದ 5 ಪರ್ಸೆಂಟ್ ಸಹಾಯಧನ ನೀಡಲಿದೆ. ಉಳಿದ ಮೊತ್ತವನ್ನು ಇತರ ಮೂಲಗಳಿಂದ ಸಂಗ್ರಹಿಸಲಾಗುವುದು. ಮಂಗಳೂರು ನಗರ ದಕ್ಷಿಣ ವಲಯ ಶಾಸಕ ಜೆ ಆರ್ ಲೋಬೋ ಇದನ್ನು ಕೊಡುವುದಾಗಿ ಭರವಸೆ ನೀಡಿದ್ದಾರೆ.

ಪ್ರಾಧಿಕಾರವು ಸ್ಕೈವಾಕ್ ನಿರ್ಮಾಣದ ಬಳಿಕ ಮನಪಾಕ್ಕೆ ಹಸ್ತಾಂತರ ಮಾಡಲಿದೆ. ಪೌರ ಪ್ರತಿನಿಧಿಗಳು ಈ ಯೋಜನೆಗೆ ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.