ಕಾಣೆಯಾದ ಮಹಿಳೆ ಅಸ್ಥಿಪಂಜರ ಪತ್ತೆ

ನಮ್ಮ ಪ್ರತಿನಿಧಿ ವರದಿ

ಮುಲ್ಕಿ : ಇಲ್ಲಿಗೆ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಕ್ಷಿಕೆರೆ ಪಂಜ ಮುಖ್ಯ ರಸ್ತೆ ಬದಿಯ ತೋಟವೊಂದರಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಮಹಿಳೆಯ ಸೀರೆ, ರವಿಕೆ ಹಾಗೂ ಟಾರ್ಚ್ ಲೈಟಿನಿಂದ ಗುರುತು ಪತ್ತೆ ಹಚ್ಚಲಾಗಿದ್ದು, ತೋಟದ ಬದಿಯ ನಿವಾಸಿ ಭವಾನಿ ಪೂಜಾರಿ (70) ಎಂದು ಗುರುತಿಸಲಾಗಿದೆ.

ಮೃತ ಭವಾನಿ ಕಳೆದ ಮೇ 28ರಂದು ಮನೆಯಿಂದ ನಾಪತ್ತೆಯಾಗಿದ್ದರು. ಮಾನಸಿಕ ಅಸ್ವಸ್ಥೆಯಾಗಿರುವ ಈಕೆಯನ್ನು ಪತ್ತೆ ಹಚ್ಚಲು ಮನೆಯವರು ಸಾಕಷ್ಟು ಪ್ರಯತ್ನಿಸಿದ್ದರೂ ಫಲಕಾರಿಯಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಮಧ್ಯಾಹ್ನ ಸ್ಥಳೀಯರಾದ ವಸಂತಿ ಎಂಬವರು ತೋಟಕ್ಕೆ ಹುಲ್ಲು ತರಲು ಹೋದಾಗ ಮೃತ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ದೇಹದ ಮೂಳೆಗಳು ಛಿದ್ರ ಛಿದ್ರವಾಗಿ ಪತ್ತೆಯಾಗಿದ್ದು, ನವಿಲುಗಳು ದೇಹವನ್ನು ತಿಂದಿರುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತ ಮಹಿಳೆಯು ಮೂರು ವರ್ಷದ ಹಿಂದೆ ಕೂಡ ಮನೆ ಬಿಟ್ಟು ಹೋಗಿದ್ದು, ಕೆಲ ದಿನಗಳ ಬಳಿಕ ವಾಪಾಸು ಬಂದಿದ್ದರು. ಆದರೆ ಈ ಬಾರಿ ಮನೆ ಬಿಟ್ಟು ಹೋದವರು ಮೃತರಾಗಿದ್ದಾರೆ. ಸಾವಿಗೆ ಕಾರಣ ತಿಳಿದುಬಂದಿಲ್ಲ.