ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ ಅಂಕೋಲಾದಲ್ಲಿ ಸ್ಥಳ ಪರಿಶೀಲನೆ

ನಮ್ಮ ಪ್ರತಿನಿಧಿ ವರದಿ

ಅಂಕೋಲಾ : ತಾಲೂಕಿನ ಹೊರವಲಯವಾದ ಬೆಳಸೆ ಗ್ರಾಮ ಪಂಚಾಯತಿಗೆ ಒಳಪಟ್ಟ ಖಾಲಿ ಜಾಗವನ್ನು ಜಿಲ್ಲಾ ಕಾರಾಗೃಹ ನಿರ್ಮಾಣಕ್ಕಾಗಿ ಬಂಧಿಖಾನೆ ಇಲಾಖೆಯ ಪೊಲೀಸ್ ಮಹಾನಿರ್ದೇಶಕ ಸತ್ಯನಾರಾಯಣ ರಾವ್ ಗುರುವಾರ ಅಧಿಕಾರಿಗಳೊಂದಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು.

ಬೆಳಸೆ ಗ್ರಾ ಪಂ ಹೆಸರಿನಲ್ಲಿ 29 ಎಕರೆ 2 ಗುಂಟೆ ಜಾಗವಿದೆ. ಬಹುತೇಕ ಕಲ್ಲು-ಬಂಡೆಗಳಿಂದಲೇ ಆವೃತ್ತವಾಗಿರುವ ಈ ಸ್ಥಳವನ್ನು ಸರ್ವೆ ಇಲಾಖೆ ಹಾಗೂ ಪೊಲೀಸ್ ಇಲಾಖೆಯವರ ಸಹಕಾರದೊಂದಿಗೆ ಸ್ಥಳ ವೀಕ್ಷಿಸಿದರು. ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿ, “ಜಿಲ್ಲಾ ಕಾರಾಗೃಹ ನಿರ್ಮಾಣಕ್ಕೆ ಸಾಕಷ್ಟು ಸ್ಥಳಾವಕಾಶದ ಅಗತ್ಯವಿದ್ದು, ನಾವು ಈಗಾಗಲೇ ಹಲವಾರು ಕಡೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಆದರೆ ಈ ಜಾಗ ಬಂಧಿಖಾನೆ ನಿರ್ಮಾಣಕ್ಕೆ ಸೂಕ್ತವಾಗಿದ್ದು, ಸದ್ಯದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು” ಎಂದರು.