ಅಕ್ರಮ ಗಣಿಗಾರಿಕೆ : ಧರಂ, ಎಚ್ಡೀಕೆ ವಿರುದ್ಧ ಎಸ್ ಐ ಟಿ ಪ್ರಕರಣ ದಾಖಲು

ಬೆಂಗಳೂರು : ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು(ಎಸ್‍ಐಟಿ) ನಿನ್ನೆ ಮಾಜಿ ಸೀಎಂಗಳಾದ ಧರಂ ಸಿಂಗ್ ಮತ್ತು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತು. ಇವರಿಬ್ಬರಲ್ಲದೆ ಹಾಲಿ ಸೇವೆಯಲ್ಲಿರುವ ಹಾಗೂ ನಿವೃತ್ತ ಸುಮಾರು 11 ಮಂದಿ ಅಧಿಕಾರಿಗಳ ವಿರುದ್ಧವೂ ಎಸ್‍ಐಟಿ ಪ್ರಕರಣ ದಾಖಲಿಸಿಕೊಂಡಿತು. ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮೂರು ತಿಂಗಳೊಳಗೆ ಈ ಪ್ರಕರಣದ ತನಿಖೆ ಪೂರ್ಣಗೊಳಿಸುವಂತೆ ಕೋರ್ಟ್ ಸೂಚಿಸಿದೆ. ಬಳ್ಳಾರಿ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶಗಳಲ್ಲಿ ಧರಂ ಸಿಂಗ್ ಮತ್ತು ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದಾಗ ಗಣಿಗಾರಿಕೆಗೆ ಅವಕಾಶ ನೀಡಿರುವ ಆರೋಪ ಎದುರಿಸುತ್ತಿದ್ದಾರೆ.