ಬಯಲುಮುಕ್ತ ಬಹಿರ್ದೆಸೆ ತಾಲೂಕಾಗಿ ಶಿರಸಿ, ಜೋಯಿಡಾ ಘೋಷಣೆ : ತನಿಖೆಗೆ ಆಗ್ರಹ

ಸಾಂದರ್ಭಿಕ ಚಿತ್ರ

ನಮ್ಮ ಪ್ರತಿನಿಧಿ ವರದಿ

ಕಾರವಾರ : ಜಿಲ್ಲಾ ಪಂಚಾಯತ ಜಿಲ್ಲೆಯ ಶಿರಸಿ ಮತ್ತು ಜೋಯಿಡಾ ತಾಲೂಕನ್ನು ಬಯಲುಮುಕ್ತ ಬಹಿರ್ದೆಸೆ ತಾಲೂಕೆಂದು ಘೋಷಿಸಿದ್ದು, ಈ ಎರಡೂ ತಾಲೂಕುಗಳಲ್ಲಿ ಇನ್ನು ಕೆಲವೆಡೆ ಶೌಚಾಲಯಗಳ ನಿರ್ಮಾಣವಾಗಬೇಕಾಗಿದ್ದರಿಂದ ಈ ಕುರಿತು ಸೂಕ್ತ ತನಿಖೆಯಾಗಬೇಕೆಂದು ರೈತ ಶಕ್ತಿ ಪರಿಷತ್ ಒತ್ತಾಯಿಸಿ ಜಿಲ್ಲಾ ಪಂಚಾಯತ ಸಿಇಓ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದೆ.

ಶಿರಸಿ ಮತ್ತು ಜೋಯಿಡಾ ತಾಲೂಕಿನ ಗ್ರಾ ಪಂ.ಗಳು ಇನ್ನೂ ಶೇ 80ರಷ್ಟು ಶೌಚಾಲಯಗಳನ್ನು ನಿರ್ಮಿಸುವ ಮೊದಲೇ ಇವೆರಡು ತಾಲೂಕುಗಳು ಜಿಪಂ.ಗೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ, ಬಯಲು ಮುಕ್ತ ಬಹಿರ್ದೆಸೆ ತಾಲೂಕೆಂದು ಘೋಷಿಸಿಕೊಂಡಿರುವುದು ಪ್ರಶಸ್ತಿಗೆ ಆಸೆಗೆಂದೇ ಹೇಳಲಾಗುತ್ತಿದೆ. ಇದಕ್ಕೊಂದು ಉತ್ತಮ ಉದಾಹರಣೆ ಎಂದರೆ ದಕ್ಷಿಣ ಕನ್ನಡ ಜಿಲ್ಲೆ ಕಳೆದ 2 ವರ್ಷಗಳ ಹಿಂದೆ ಸಂಪೂರ್ಣ ಶೌಚಾಲಯ ಮುಕ್ತ ಜಿಲ್ಲೆ ಎಂದು ಪ್ರಶಸ್ತಿ ಪಡೆದು ರಾಷ್ಟ್ರಮಟ್ಟದಲ್ಲಿ ಗೌರವಿಸಿಕೊಂಡಿತ್ತು. ಆದರೆ ಈ ಬಾರಿ ಕೇಂದ್ರ ಸರ್ಕಾರ ಆ ಜಿಲ್ಲೆಯನ್ನು ತನಿಖೆಗೆ ಒಳಪಡಿಸಿದಾಗ ಅಲ್ಲಿಯ ತಾಲೂಕುಗಳಲ್ಲಿ ಸಾವಿರ ಸಂಖ್ಯೆಯಲ್ಲಿ ಶೌಚಾಲಯ ಇಲ್ಲದಿರುವ ಬಗ್ಗೆ ವರದಿಯಿಂದ ಬಹಿರಂಗವಾಗಿತ್ತು. ಕೇವಲ ಪ್ರಶಸ್ತಿ ಮೇಲೆ ಕಣ್ಣಿಟ್ಟು ಹಾಗೂ ತಾ ಪಂ ಮತ್ತು ಜಿ ಪಂ ಅಧಿಕಾರಿಗಳ ಪ್ರತಿಷ್ಠೆಯಿಂದಾಗಿ ಶಿರಸಿ ಮತ್ತು ಜೋಯಿಡಾ ಎರಡೂ ತಾಲೂಕುಗಳನ್ನು ಬಯಲುಮುಕ್ತ ಬಹಿರ್ದೆಸೆ ಗ್ರಾಮ ಎಂದು ಘೋಷಿಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.