ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಹೃದಯ ತಜ್ಞರಿಲ್ಲದೇ ಸಮಸ್ಯೆ

ನಮ್ಮ ಪ್ರತಿನಿಧಿ ವರದಿ

ಶಿರಸಿ : ರಾಜ್ಯದಲ್ಲೇ ಗಮನ ಸೆಳೆದಿರುವ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ನಿತ್ಯ 300-400 ರೋಗಿಗಳು ಬಂದು ಹೋಗುತ್ತಾರೆ. ತಿಂಗಳಿಗೆ 200ಕ್ಕೂ ಹೆಚ್ಚು ಹೆರಿಗೆ ಆಗುತ್ತದೆ. ಅದರಲ್ಲೂ ಹೃದಯ ಸಂಬಂಧಿ, ಇತರ ಪೂರಕ ಕಾಯಿಲೆಗೆ ಸಂಬಂಧ ನಿತ್ಯ 200ರಷ್ಟು ರೋಗಿಗಳು ಬರುತ್ತಿದ್ದು, ಇದೀಗ 2 ತಿಂಗಳಿಂದ ಫಿಜಿಶಿಯಿನ್ಸ್ ಇಲ್ಲದೇ ದೊಡ್ಡ ಸಮಸ್ಯೆ ವೃದ್ಧರಿಗೆ, ಇತರರಿಗೂ ಆಗಿರುವುದು ಕಂಡುಬಂದಿದೆ.

ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಫಿಜಿಶಿಯನ್ ಡಾ ಪ್ರಕಾಶ ಪುರಾಣಿಕ ಅವರ ಸೇವೆ ಶಿರಸಿಯಲ್ಲಿ 10 ವರ್ಷವಾಗಿರುವುದರಿಂದ ಸಿದ್ದಾಪುರಕ್ಕೆ ವರ್ಗಾವಣೆ ಮಾಡಲಾಗಿದೆ. ಅವರ ಜಾಗಕ್ಕೆ ಬೇರೆ ಫಿಜಿಶಿಯನ್ ಬರಲೇ ಇಲ್ಲ. ಶಿರಸಿ ಸಹಿತ ಸುತ್ತಮುತ್ತಲಿನ ತಾಲೂಕಿನ ಸಾಕಷ್ಟು ಬಡವರು ಡಾ ಪುರಾಣಿಕರ ಮೇಲೆ ಅವಲಂಬಿತರಾಗಿದ್ದರು. ಹೃದಯ ಸಂಬಂಧಿ ಖಾಯಿಲೆ, ಡಯಾಬಿಟಿಸ್, ಬಿಪಿ, ಇತರ ಕಾಯಿಲೆ, ಜನರಲ್ ಮೆಡಿಸನ್ ಸಂಬಂಧ ನಿತ್ಯ ನೂರಾರು ರೋಗಿಗಳು ಇವರಿಂದ ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲೂ ವೃದ್ಧರೇ ಹೆಚ್ಚು ಬರುತ್ತಿದ್ದು, 2 ತಿಂಗಳೀಚೆಗೆ ವೈದ್ಯರೇ ಇಲ್ಲದೇ ವಾಪಸ್ ಹೋಗುತ್ತಿದ್ದಾರೆ. ಕೆಲವು ಗಂಭೀರ ಪ್ರಕರಣ ಬಂದಾಗ ಇತರ ವೈದ್ಯರು ಆಡ್ಮಿಟ್ ಮಾಡಿಕೊಳ್ಳಲು ಹಿಂದೇಟು ಹಾಕಿ ಬೇರೆ ಕಡೆ ಕಳುಹಿಸಿದ್ದು ಇದೆ. ಈಗಾಗಲೇ ಹಿರಿಯ ವೈದ್ಯ ಡಾ ರಾಮಾ ಹೆಗಡೆ ವರ್ಗಾವಣೆಯಾದ ಬಳಿಕ ಸಾಕಷ್ಟು ರೋಗಿಗಳು ಕಡಿಮೆಯಾಗಿದ್ದರೂ, ಬಳಿಕ ಬಂದ ಸರ್ಜನ್ ಡಾ ರೇವಣಕರ ಅವರು ಸ್ವಲ್ಪ ಪಿಕಪ್ ಮಾಡಿಕೊಂಡಿದ್ದರು. ಆದರೆ ಡಾ ಪುರಾಣಿಕರಂತಹ ಮಹತ್ವದ ವೈದ್ಯರೇ ಹೋದ ನಂತರ ಬೇರೆಯವರು ಬಾರದೇ ಬಹಳ ಸಮಸ್ಯೆಯಾಗಿದೆ. ಇದೀಗ ಬರುವ ರೋಗಿಗಳು ಜನಪ್ರತಿನಿಧಿಗಳಿಗೆ, ಶಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಬೇರೆ ವೈದ್ಯರು ಬರುವತನಕ ಇವರನ್ನು ರಿಲಿವ್ ಮಾಡಿದ್ದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೃದಯ ವೈದ್ಯರಿಲ್ಲದೇ ಯಾವುದಾದರೂ ಬಡವರಿಗೆ ತೊಂದರೆಯಾದರೆ ಸಂಬಂಧಪಟ್ಟ ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳೇ ಜವಾಬ್ದಾರಿ ಆಗಬೇಕಾಗುತ್ತದೆ. ಬೇರೆ ವೈದ್ಯರು ಬರುವತನಕ ಡಾ ಪುರಾಣಿಕ ಅವರೇ ವಾರಕ್ಕೆ 3 ದಿನ ಶಿರಸಿಗೆ ಬಂದು ಸೇವೆ ನೀಡುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.