ವೈದ್ಯರ ಹಲ್ಲೆ ಪ್ರಕರಣದ ತನಿಖೆ ಆರಂಭಿಸಿದ ಶಿರಸಿ ಪೊಲೀಸರು

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿಯ ಟಿ ಎಸ್ ಎಸ್ ಆಸ್ಪತ್ರೆಯ ವೈದ್ಯರ ಮೇಲೆ ಸಂಸದ ಅನಂತ ಹೆಗಡೆ ಹಾಗೂ ಸಹಚರರು ನಡೆಸಿದ ಹಲ್ಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಶಿರಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಗುರುವಾರ ಮಧ್ಯರಾತ್ರಿ ಸಂಸದ ಹಾಗೂ ಬಿಜೆಪಿ ಮುಖಂಡ ಕೃಷ್ಣ ಎಸಳೆ ಮೇಲೆ ಸ್ವಯಂಪ್ರೇರಿತ ಪ್ರಕರಣವನ್ನು ಶಿರಸಿ ಮಾರುಕಟ್ಟೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ತಾಯಿ ಚಿಕಿತ್ಸೆಗೆ ಅಲಕ್ಷ್ಯ ತೋರಿದ್ದಾರೆಂಬ ಕಾರಣಕ್ಕೆ ಸಂಸದ ಜನವರಿ 2ರ ರಾತ್ರಿ ಶಿರಸಿ ಟಿ ಎಸ್ ಎಸ್ ಆಸ್ಪತ್ರೆಯ ವೈದ್ಯರಾದ ಮಧುಕೇಶ್ವರ, ಬಾಲಚಂದ್ರ ಭಟ್ಟ, ಸಿಬ್ಬಂದಿ ರಾಹುಲ ಮೇಲೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಶಿರಸಿ ವೈದ್ಯರುಗಳು ಪ್ರತಿಭಟನೆ ನಡೆಸಿದ್ದರು. ಆದರೆ ಹಲ್ಲೆಗೊಳಗಾದ ವೈದ್ಯರು ದೂರು ದಾಖಲಿಸಿರಲಿಲ್ಲ.

ತನಿಖೆ ಆರಂಭ

ಈ ಘಟನೆಯು ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾದ ಬೆನ್ನಲ್ಲೇ ರಾಜ್ಯ ಸಂಘವು ಗೃಹಮಂತ್ರಿ ಪರಮೇಶ್ವರರನ್ನು ಭೇಟಿಯಾಗಿ ಸೀಸಿಟೀವಿ ಮತ್ತಿತರ ದಾಖಲೆ ಇಟ್ಟು ಪ್ರಕರಣ ದಾಖಲಿಸಲು ಅಗತ್ಯ ಒತ್ತಡ ಹಾಕಿದ ಬೆನ್ನಲ್ಲೇ ಗೃಹಮಂತ್ರಿ ಪೊಲೀಸ್ ಮುಖ್ಯಸ್ಥರಿಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲು ಸೂಚಿಸಿದರು. ಅದರಂತೆ ರಾಜ್ಯ ಪೊಲೀಸ್ ಮುಖ್ಯಸ್ಥರು, ಮಂಗಳೂರು ಐಜಿಪಿ ಮೂಲಕ ಶಿರಸಿ ಡಿವೈಎಸ್ಪಿಗೆ ಸೂಚನೆ ನೀಡಿ ಮಧ್ಯರಾತ್ರಿಯೇ ಪ್ರಕರಣ ದಾಖಲಿಸಿ ಬೆಳಿಗ್ಗೆ ಬೆಂಗಳೂರಿಗೆ ವರದಿ ನೀಡಲು ಸೂಚಿಸಿದ್ದರು. ಅದರಂತೆ ಪ್ರಕರಣ ದಾಖಲಿಸಿಕೊಂಡು ಬೆಂಗಳೂರಿಗೂ ವರದಿಯನ್ನು ಸ್ಥಳೀಯ ಪೊಲೀಸರು ಕಳುಹಿಸಿದ್ದಾರೆ.

ಮೊದಲ ಹಂತವಾಗಿ ಡಿವೈಎಸ್ಪಿ ನಾಗೇಶ ಶೆಟ್ಟಿ ನೇತೃತ್ವದಲ್ಲಿ ಸಿಪಿಐ ಕೃಷ್ಣಾನಂದ ಹಾಗೂ ಇತರ  ಪಿಎಸೈಗಳು ಸಂಸದರ ಹಾಗೂ ಕೃಷ್ಣ ಎಸಳೆ ಮನೆಗೂ ತೆರಳಿದ್ದು, ಅಲ್ಲಿ ಅವರು ಸಿಗದ ಕಾರಣ ನೊಟೀಸ್ ನೀಡಿ ವಾಪಸ್ ಆಗಿದ್ದಾರೆ.

ಘಟನೆ ನಡೆದ ಟಿ ಎಸ್ ಎಸ್ ಆಸ್ಪತ್ರೆಗೆ ತೆರಳಿ ಸ್ಥಳದಲ್ಲಿ ಪಂಚನಾಮೆ ಪ್ರಕ್ರಿಯೆ ಸಹ ಮಾಡಿದ್ದಾರೆ. 2 ದಿನಗಳ ಹಿಂದಷ್ಟೇ ಹಲ್ಲೆಗೊಳಗಾದ ವೈದ್ಯರ ಹಾಗೂ ಸಿಬ್ಬಂದಿ ಹೇಳಿಕೆ ಪಡೆದಿರುವದರಿಂದ ಮತ್ತೆ ಹೊಸ ಹೇಳಿಕೆ ಪಡೆದಿಲ್ಲ ಎಂದು ಗೊತ್ತಾಗಿದೆ. ಇದಾದ ನಂತರ ವಿಶೇಷ ತಂಡ ರಚಿಸಿ ಹಲ್ಲೆ ಮಾಡಿದ ಇಬ್ಬರ ಶೋಧಕ್ಕೆ ಮುಂದಾಗಿದ್ದಾರೆ.

ತನಿಖೆ ¨ಗ್ಗೆ ಶಿರಸಿ ಡಿವೈಎಸ್ಪಿ ನಾಗೇಶ ಶೆಟ್ಟಿ ಅವರನ್ನು ಕೇಳಿದಾಗ, “ತನಿಖೆ ಆರಂಭಿಸಿದ್ದು, ಸಂಸದರು, ಕೃಷ್ಣ ಎಸಳೆಯವರು ಮನೆಯಲ್ಲಿ ಸಿಗದ ಕಾರಣ ಅವರ ಪತ್ತೆಗೆ ವಿಶೇಷ ತಂಡ ರಚಿಸಿದ್ದೇವೆ. ಸಂಸದರು ಸಿಕ್ಕಿದ ನಂತರ ಲೋಕಸಭೆ ಸ್ಪೀಕರಿಗೆ ಇಲಾಖೆಯಿಂದ ಮಾಹಿತಿ ನೀಡಬೇಕಾಗುತ್ತದೆ” ಎಂದರು.