ಶಿರಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಪರದಾಟ

ನಮ್ಮ ಪ್ರತಿನಿಧಿ ವರದಿ

ಶಿರಸಿ : ಇಲ್ಲಿನ ಬಸ್ ನಿಲ್ದಾಣದ ಹೊರಗೆ ಬಸ್ಸುಗಳ ನಿಲುಗಡೆ ಅವ್ಯವಸ್ಥೆ, ರಸ್ತೆ ಮೇಲೆ ಜನರು ಪರದಾಡುವಂತಾಗಿರುವ ಸಮಸ್ಯೆಯನ್ನು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಸಂಜೆ ಪ್ರತ್ಯಕ್ಷವಾಗಿ ಕಂಡು ಅಧಿಕಾರಿಗಳ ವಿರುದ್ಧ ಸ್ಥಳದಲ್ಲೇ ಅಸಮಾಧಾನ ವ್ಯಕ್ತಪಡಿಸಿದರು.

ಶಾಸಕರು ಬಸ್ ನಿಲ್ದಾಣ ಸರ್ಕಲ್ ಬಳಿ ಹೋದಾಗ ರಸ್ತೆ ಮೇಲೆ ನೂರಾರು ಜನರು ನಿಂತು ಬಸ್ಸಿಗೆ ಕಾಯುವ ಸಮಸ್ಯೆ ಕಂಡು ಜನರ ಬಳಿ ಹೋಗಿ ಅವರ ದೂರು ಆಲಿಸಿದರು. ಬಳಿಕ ರಿಕ್ಷಾ ಚಾಲಕರು ತಮಗೆ ಆಗುತ್ತಿರುವ ತೊಂದರೆ ವಿವರಿಸಿದರು.

ಆಗ ಶಾಸಕರು ಅಸಮಾಧಾನಗೊಂಡು ಸಂಚಾರ ನಿಯಂತ್ರಕ ಮಡಗಾಂವಕರ ಅವರನ್ನು ಕರೆಸಿ, “ನಿಲ್ದಾಣದ ಹೊರಗೆ 5 ನಿಮಿಷಕ್ಕಿಂತ ಜಾಸ್ತಿ ಬಸ್ ನಿಲ್ಲಿಸಬಾರದೆಂಬ ನಿಯಮ ಮಾಡಿ. ಇಲ್ಲಿ ಎಲ್ಲ ನಿಯಮ ಬ್ರೇಕ್ ಆಗುತ್ತಿದೆ. ರಸ್ತೆ ಮೇಲೆ ಹುಬ್ಬಳ್ಳಿ, ಕುಮಟಾ, ಸಿದ್ದಾಪುರ, ಯಲ್ಲಾಪುರ ಒಂದು ಬಸ್ ನಿಂತಾಗ, ಅದೇ ಊರಿಗೆ ಹೋಗುವ ಇನ್ನೊಂದು ಬಸ್ ತಂದು ನಿಲ್ಲಿಸಿ ಜಾಮ್ ಮಾಡÀಬಾರದು. ಆದಷ್ಟು ನಿಲ್ಲಿಸಲೇಬೇಕಾದ ಬಸ್ಸುಗಳನ್ನು ನಿಲ್ದಾಣದೊಳಗೆ ಇಟ್ಟುಕೊಳ್ಳಬೇಕು. ಇಡೀ ದಿನ ಬಸ್-ಆಟೋದವರು ಜಗಳ ಆಡುತ್ತಾ ಹೋದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಬಸ್ಸಿನವರು ಆದಷ್ಟು ಸಂಚಾರ ಅವ್ಯವಸ್ಥೆಯಾಗದಂತೆ ಬಿಗು ಕ್ರಮ ಕೈಗೊಳ್ಳಬೇಕು” ಎಂದು ಎಚ್ಚರಿಸಿದರು.

ನಗರಸಭೆ ಸಿಮೆಂಟ್ ರಸ್ತೆ ಕೆಲಸ ನಿಧಾನವಾಗುವ ಬಗ್ಗೆ ಅಟೋ ಚಾಲಕರು ದೂರಿದಾಗ ಶಾಸಕರು, ನಗರಸಭೆ ಅಧಿಕಾರಿಗಳ ಜೊತೆ ಮಾತನಾಡಿ, “ಬೇಗ ಕೆಲಸ ಮುಗಿಸಲು ಕ್ರಮ ವಹಿಸುತ್ತೇವೆ. ಇಂತಹ ಕೆಲಸಗಳು ತ್ವರಿತವಾಗಿ ಆಗಬೇಕು” ಎಂದು ಸೂಚಿಸಿದರು. ಮತ್ತೆ ಬಸ್ ನಿಲ್ದಾಣದ ಹೊರಗೆ ಅವ್ಯವಸ್ಥೆ ದೂರು ಬಂದರೆ ಹಿರಿಯ ಅಧಿಕಾರಿಗಳಿಗೆ ದೂರಬೇಕಾಗುತ್ತದೆಯೆಂದು ಸ್ಥಳೀಯ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.