ಡೀಸಿ ಕಚೇರಿಯಲ್ಲಿ ಏಕಗವಾಕ್ಸಿ ಕೇಂದ್ರ `ಸ್ಪಂದನ’ ಆರಂಭ

ಮಂಗಳೂರು : ಜನರ ಅನುಕೂಲಕ್ಕಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸರ್ಕಾರದ ಪಟ್ಟಿಯಲ್ಲಿರುವ ಸುಮಾರು 40 ಸೇವೆಗಳನ್ನು ಒದಗಿಸಬಲ್ಲ ಏಕಗವಾಕ್ಸಿ ಕೇಂದ್ರ ಸ್ಪಂದನವನ್ನು ಶುಕ್ರವಾರ ತೆರೆಯಲಾಗಿದೆ.ಕಚೇರಿಯ ಮೊದಲ ಅಂತಸ್ತಿನಲ್ಲಿ `ಸ್ಪಂದನ’ ಕೇಂದ್ರ ಆರಂಭಗೊಂಡಿದ್ದು, ಅಟಲಜೀ ಜನಸ್ನೇಹಿ ಕೇಂದ್ರ ಯೋಜನೆಯಲ್ಲಿ ಸಾರ್ವಜನಿಕರಿಗೆ ನೀಡಲಾಗುತ್ತಿರುವ ಎಲ್ಲಾ 40 ಸೇವೆಗಳು ಈ ಕೇಂದ್ರದಲ್ಲಿ ದೊರೆಯಲಿದೆ.

ಜಾತಿ ಮತ್ತು ಆದಾಯ ಪ್ರಮಾಣಪತ್ರ, ಇತರ ಹಿಂದುಳಿದ ವರ್ಗಗಳ ದೃಢೀಕರಣ ಪತ್ರ, ಹಿಂದುಳಿದ ವರ್ಗಗಳ ಪ್ರಮಾಣಪತ್ರ, ಮೃತರ ಕುಟುಂಬದ ಜೀವಂತ ಸದಸ್ಯರ ದೃಢೀಕರಣ ಪತ್ರ, ಅನುಸೂಚಿತ ಜಾತಿ ಅಥವಾ ಅನುಸೂಚಿತ ಪಂಗಡಗಳ ಪ್ರಮಾಣಪತ್ರ, ಸರಕಾರಿ ನೌಕರಿಯಲ್ಲಿ ಇಲ್ಲದಿರುವ ದೃಢೀಕರಣ ಪತ್ರ, ಭೂಮಿ ಯೋಜನೆ ಮತ್ತು ಉಪಸಮೀಕ್ಷೆ ಇಲಾಖೆಗಳು ಒದಗಿಸುವ ಸೇವೆಗಳು ಇಲ್ಲಿ ಲಭ್ಯವಿರುತ್ತದೆ ಎಂದು ಹೆಚ್ಚುವರಿ ಜಿಲ್ಲಾ ಆಯುಕ್ತ ಕುಮಾರ ಹೇಳಿದ್ದಾರೆ. ಇದೊಂದು ವಿಸ್ತರಣಾ ಸೌಲಭ್ಯವಾಗಿದ್ದು, ಈ ಹಿಂದೆ ತಾಲೂಕು ಕೇಂದ್ರ ಕಚೇರಿಗಳ ತಾಲೂಕು ಆಫೀಸುಗಳಲ್ಲಿ ಮಾತ್ರ ದೊರೆಯುತ್ತಿತ್ತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಕೇಂದ್ರವನ್ನು ತೆರೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲಾಡಳಿತವು ಮೈಸೂರು, ಚಾಮರಾಜನಗರ, ದೇವನಗಿರಿ ಮತ್ತು ಬೆಳಗಾವಿ ಜಿಲ್ಲೆಗಳ ಸಾಲಿಗೆ ಸೇರಿದೆ.