ಸೋಲು ತಪ್ಪಿಸಿದ `ಸಿಲ್ವ’ದ್ವಯರು ; ಭಾರತಕ್ಕೆ ಸರಣಿ

ಭಾರತ -ಶ್ರೀಲಂಕಾ ತೃತೀಯ ಟೆಸ್ಟ್

  • ಎಸ್ ಜಗದೀಶ್ಚಂದ್ರ ಅಂಚನ್, ಸೂಟರಪೇಟೆ

ಶ್ರೀಲಂಕಾ ತಂಡದ `ಸಿಲ್ವ’ದ್ವಯರು ತೋರಿದ ದಿಟ್ಟ ಬ್ಯಾಟಿಂಗ್ ಹೋರಾಟದಿಂದ ಭಾರತಕ್ಕೆ ದೊರೆಯಬಹುದಾಗಿದ್ದ ಗೆಲುವು ತಪ್ಪಿ ಹೋಯಿತು. ಅತ್ಯಂತ ಕುತೂಹಲ ಕೆರಳಿಸಿದ ತೃತೀಯ ಟೆಸ್ಟ್ ಕೊನೆಯ ದಿನವಾದ ಬುಧವಾರ ಖಂಡಿತವಾಗಿಯೂ ಭಾರತೀಯ ಕ್ರಿಕೆಟ್ ತಂಡಕ್ಕೆ ಗೆಲುವು ಪ್ರಾಪ್ತಿಯಾಗಬಹುದೆಂಬ ನಿರೀಕ್ಷೆಗೆ ಶ್ರೀಲಂಕಾದ ಆಲ್ರೌಂಡರ್ ಆಟಗಾರರಾದ ಧನಂಜಯ ಡಿಸಿಲ್ವ ಹಾಗೂ ರೋಶನ್ ಸಿಲ್ವ ತಡೆಯಾದರು. ಇವರಿಬ್ಬರ ಸಮಯೋಚಿತವಾದ ಆಟದಿಂದ ಶ್ರೀಲಂಕಾ ತಂಡ ಸೋಲಿನಿಂದ ಬಚಾವಾಯಿತು.

 

ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ತೃತೀಯ ಹಾಗೂ ಸರಣಿಯ ಕೊನೆಯ ಟೆಸ್ಟ್ ಉಭಯತಂಡಗಳ ಸಮಬಲ ಹೋರಾಟದಿಂದ ಪಂದ್ಯ `ಡ್ರಾ’ದಲ್ಲಿ ಮುಕ್ತಾಯಗೊಂಡಿತು. ಈ ಟೆಸ್ಟ್ ಜಯಿಸಲು 410 ರನ್ನುಗಳ ಗುರಿಯನ್ನು ಪಡೆದಿದ್ದ ಶ್ರೀಲಂಕಾ, ನಾಲ್ಕನೇ ದಿನದಾಟಕ್ಕೆ 31 ರನ್ನಿಗೆ 3 ವಿಕೆಟ್ ಕಳೆದುಕೊಂಡಿತ್ತು. ಕೊನೆಯ ದಿನ ಭಾರತ ಗೆಲುವಿಗಾಗಿ 7 ವಿಕೆಟುಗಳನ್ನು ಉರುಳಿಸ ಬೇಕಾಗಿತ್ತು. ಹಾಗೆಯೇ ಶ್ರೀಲಂಕಾ 379 ರನ್ನುಗಳ ಗುರಿಯೊಂದಿಗೆ ಕೊನೆಯ ದಿನದ ಆಟ ಆರಂಭಿಸಿತು.

ಆದರೆ, ದಿನದಾಟ ಅಂತ್ಯಕ್ಕೆ ಶ್ರೀಲಂಕಾ 103 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 299 ರನ್ ಗಳಿಸಿ ಆಟ ಮುಗಿಸಿತು. ಒನ್ ಡೌನ್ ಬ್ಯಾಟ್ಸಮನ್ ಧನಂಜಯ ಡಿಸಿಲ್ವ ಹಾಗೂ ನಾಯಕ ಚಂಡಿಮಾಲ್ ಅವರು ಐದನೇ ವಿಕೆಟಿಗೆ 112 ರನ್ನುಗಳನ್ನು ; ರೋಶನ್ ಸಿಲ್ವ – ನಿರೋಶನ್ ಡಿಕ್ವೆಲ್ಲಾ ಆರನೇ ವಿಕೆಟಿಗೆ ಮುರಿಯದ 94 ರನ್ನುಗಳ ಜೊತೆಯಾಟ ಭಾರತೀಯ ತಂಡದ ಗೆಲುವನ್ನು ಕಿತ್ತುಕೊಂಡಿತು.

ಭಾರತ ತಂಡದ ಗೆಲುವಿಗೆ ತಡೆಯಾದ ಪ್ರಮುಖ ದಾಂಡಿಗನಾಗಿ ಗುರುತಿಸಿಕೊಂಡ ಧನಂಜಯ ಡಿಸಿಲ್ವ ಆಕರ್ಷಕ ಶತಕ ಸಿಡಿಸಿ ಸಂಭ್ರಮಿಸಿದರು. 219 ಎಸೆತಗಳನ್ನು ಎದುರಿಸಿ, 15 ಬೌಂಡರಿ, 1 ಸಿಕ್ಸಿನೊಂದಿಗೆ 119 ರನ್ ಬಾರಿಸಿದ ಧನಂಜಯ ಗಾಯಗೊಂಡು ನಿವೃತ್ತಿಗೊಂಡರು. ನಂತರ ರೋಶನ್ ಸಿಲ್ವ 74 ರನ್ ಹಾಗೂ ನಿರೋಶನ್ ಡಿಕ್ವೆಲ್ಲಾ 44 ರನ್ ಗಳಿಸಿ ಅಜೇಯರಾಗಿ ಉಳಿದು ತಂಡವನ್ನು ಆದರಿಸಿದರು.

ಅಂತೂ ಉಭಯತಂಡಗಳ ನಡುವಣ ಮೂರು ಟೆಸ್ಟ್ ಪಂದ್ಯಗಳ ಕ್ರಿಕೆಟ್ ಸರಣಿ ಮುಕ್ತಾಯಗೊಂಡಿದ್ದು, ಭಾರತೀಯ ಕ್ರಿಕೆಟ್ ತಂಡ ಸರಣಿಯನ್ನು 1-0 ಕೈವಶ ಮಾಡಿಕೊಂಡಿತು. ಈ ಸರಣಿ ಗೆಲುವಿನೊಂದಿಗೆ ಭಾರತ ಸತತ 9 ಸರಣಿ ಗೆದ್ದು ವಿಶ್ವದಾಖಲೆ ನಿರ್ಮಿಸಿದೆ. ಈ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.