ಸಿದ್ದುಗೆ ರಾಜಕೀಯ ಕೌಶಲ್ಯ ಕೊರತೆ : ಧರಂ

 ಕಲಬುರ್ಗಿ : ಬಹಳ ಅಪರೂಪವೆಂಬಂತೆ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರು ರಾಜ್ಯ ರಾಜಕೀಯ ಪರಿಸ್ಥಿತಿಯ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದು, ಸದ್ಯ ಪಕ್ಷ ಹಾಗೂ ಸರಕಾರ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ “ರಾಜಕೀಯ ನಿರ್ವಹಣಾ ಕೌಶಲ್ಯಗಳ ಕೊರತೆಯೇ” ಕಾರಣವೆಂದಿದ್ದಾರೆ.

“ಸಿದ್ದರಾಮಯ್ಯ  ರಾಜಕೀಯ ವಿಚಾರಗಳನ್ನು ನಿರ್ವಹಿಸುವ ರೀತಿಯಲ್ಲಿ ಬಹಳಷ್ಟು ಸುಧಾರಣೆಗಳಾಗಬೇಕಿದೆ. ಹಳೆ ಕಾಂಗ್ರೆಸ್ಸಿಗರ ಹಾಗೂ  ಇತರ ಪಕ್ಷಗಳಿಂದ ವಲಸೆ ಬಂದು ಕಾಂಗ್ರೆಸ್ ಪಕ್ಷದಲ್ಲಿ ನೆಲೆಯೂರಿದವರ ನಡುವಿನ ಅಂತರ ಇನ್ನೂ ಬಹಳಷ್ಟಿದೆ. ಎಲ್ಲಾ ನಾಯಕರುಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುವುದು ಅವರ ಕರ್ತವ್ಯ” ಎಂದು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ  ಧರಂ ಹೇಳಿದ್ದಾರೆ.

ಮಾಜಿ ಸಚಿವ ಮೇಟಿ ಸೆಕ್ಸ್ ಹಗರಣ ಸಹಿತ ಸರಕಾರವನ್ನು ಕಾಡಿದ ಹಲವು ವಿವಾದಗಳನ್ನು ಉಲ್ಲೇಖಿಸಿದ ಸಿಂಗ್, “ಪಕ್ಷವು ಮುಂದಿನ ವಿಧಾನಸಭಾ ಚುನಾವಣೆ ಎದುರಿಸುವ ಮೊದಲು ಸಾಕಷ್ಟು ತಾಲೀಮು ನಡೆಸುವ ಅಗತ್ಯವಿದೆ” ಎಂದಿದ್ದಾರೆ.

ಮುಂದಿನ ಚುನಾವಣೆಯನ್ನು ಪಕ್ಷ ಆತ್ಮವಿಶ್ವಾಸದಿಂದ ಎದÀುರಿಸುವಂತೆ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ತಮ್ಮ 80ನೇ ಹುಟ್ಟುಹಬ್ಬದ ಸಂದರ್ಭ ಇಲ್ಲಿ ಡಿಸೆಂಬರ್ 25ರಂದು ಆಯೋಜಿಸಲಾಗುವ ಬೃಹತ್ ಸಮಾವೇಶದಲ್ಲಿ  ಮುಖ್ಯಮಂತ್ರಿಯ ಮೇಲೆ  ಒತ್ತಡ ಹೇರಲಾಗುವುದು ಎಂದು ಧರಂ ಹೇಳಿದ್ದಾರೆ.