ಪ್ರಾರ್ಥನೆಯಿಂದ ಶಾಂತಿ, ನೆಮ್ಮದಿ

ಬದುಕು ಬಂಗಾರ-218

ಪ್ರತಿ ದಿನ ಮನೆಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಪರಿಪಾಠವನ್ನು ಹೆಚ್ಚಿನವರು ರೂಢಿಸಿಕೊಂಡಿದ್ದಾರೆ. ಆದರೆ ಈ ಆಧುನಿಕ ಜೀವನದ ಭರಾಟೆಯಲ್ಲಿ ಕೆÀಲವರು ದೇವರನ್ನು ಸ್ಮರಿಸಲು ಮರೆತೇ ಹೋಗಿದ್ದಾರೆಂಬುದು ಸುಳ್ಳಲ್ಲ. ಪ್ರ್ರಾರ್ಥನೆ ಎಂಬುದು ದೇವರು-ಮನುಷ್ಯನ ನಡುವಿನ ಕೊಂಡಿ. ನಾವು ಯಾರಲ್ಲೂ ಹೇಳಿಕೊಳ್ಳದ ನಮ್ಮ ನೋವುಗಳನ್ನು ನಮ್ಮ ಮನದಾಳದ ಮಾತುಗಳನ್ನು ಹಾಗೂ ನಮ್ಮ ಆಶೋತ್ತರಗಳನ್ನು ದೇವರ ಮುಂದೆ ಮನಬಿಚ್ಚಿ ಹೇಳಿಕೊಳ್ಳುತ್ತೇವೆ.

ಯಾವುದೇ ಸಂಬಂಧವಿರಲಿ ಅದರಲ್ಲಿ ಉತ್ತಮ ಸಂವಹನ ಅತೀ ಮುಖ್ಯ. ಅಂತೆಯೇ ಪ್ರಾರ್ಥನೆಯ ಮೂಲಕ ನಾವು ದೇವರೊಡನೆ ಸಂವಹನ ನಡೆಸುತ್ತೇವೆ. ಆತನಿಗೆ ಇನ್ನಷ್ಟು ಹತ್ತಿರವಾಗುತ್ತೇವೆ.

ಪ್ರಾರ್ಥನೆ ನಮಗೊಂದು ರಕ್ಷಾ ಕವಚವಿದ್ದಂತೆ. ಅದರ ಶಕ್ತಿ ಅಗಾಧ. ಬದುಕಿನ ಹಲವಾರು ಸವಾಲುಗಳು, ಅಡೆತಡೆಗಳ ನಡುವೆ ಪ್ರಾರ್ಥನೆ ನಮ್ಮಲ್ಲಿ ಹೊಸ ನಿರೀಕ್ಷೆಗಳನ್ನು ಹಾಗೂ ಭರವಸೆಗಳನ್ನು ಮೂಡಿಸುತ್ತದೆ. ಪ್ರತಿನಿತ್ಯ ಪ್ರಾರ್ಥನೆ ಸಲ್ಲಿಸಿದಾಗ ನೀವು ಸವಾಲುಗಳನ್ನು ಎದುರಿಸಲು ಇನ್ನಷ್ಟು ಧೈರ್ಯ ಪಡೆಯುತ್ತೀರಿ.

ಪ್ರಾರ್ಥನೆ ಹಲವು ಸಮಸ್ಯೆಗಳಿಗೆ ಒಂದು ದಿವ್ಯೌಷಧಿ ಇದ್ದಂತೆ. ಯಾವುದೇ ಔಷಧಿಗಳಿಂದ ಗುಣವಾಗದ ಕಾಯಿಲೆಗಳು ಕೆಲವೊಮ್ಮೆ ಕೇವಲ ಪ್ರಾರ್ಥನೆಗಳ ಬಲದಿಂದಲೇ ಗುಣವಾಗಿವೆ ಎಂಬುದು ತಿಳಿದವರು ಹೇಳುವ ಮಾತು.

ಇಂದಿನ ಮಕ್ಕಳು ದೇವರಿಗೆ ಪ್ರಾರ್ಥನೆ ಸಲ್ಲಿಸುವ ಬಗ್ಗೆ ಅಸಡ್ಡೆ ತೋರಬಹುದು. ಅವರಿಗೆ ಪ್ರಾರ್ಥನೆಯ ಮಹತ್ವವನ್ನು ತಿಳಿ ಹೇಳಿ, ಮನೆಯಲ್ಲಿ ಎಲ್ಲರೂ ಜತೆಯಾಗಿಯೇ ಪ್ರಾರ್ಥನೆ ಸಲ್ಲಿಸುವಂತೆ ಮಾಡಿ.

ಪ್ರಾರ್ಥನೆಯ ಅಗಾಧ ಮಹತ್ವವನ್ನು ಅರಿಯುವುದು ಎಲ್ಲರ ಕರ್ತವ್ಯ. ಭಗವಂತನನ್ನು ನೋಡಿದವರ್ಯಾರೂ ಇಲ್ಲ. ಆದರೆ ಆ ಭಗವಂತನೆಂಬ ಶಕ್ತಿಯ ಅರಿವು ಎಲ್ಲರಿಗೂ ಆಗದೇ ಇರದು. ನಮ್ಮ ಪ್ರಾರ್ಥನೆಯಿಂದ ಆ ಶಕ್ತಿಯೇ ನಮನ್ನು ಕಾಪಾಡುತ್ತದೆ. ಜೀವನದಲ್ಲಿ ಸಮಸ್ಯೆಯೆದುರಾದಾಗ ಮಾತ್ರ ದೇವರನ್ನು ನೆನೆಸುವವರು ಇದ್ದಾರೆ. ಸರ್ವಾಂತರ್ಯಾಮಿಯಾಗಿರುವ ದೇವರನ್ನು ಸದಾ ಸ್ಮರಿಸುವುದರಿಂದ ಆತನಿಗೆ ಪ್ರಾರ್ಥನೆ ಸಲ್ಲಿಸುವುದರಿಂದ ನಮಗೆ ದೊರಕುವ ಮನಃಶಾಂತಿ, ನೆಮ್ಮದಿಗೆ ಯಾವುದೂ ಸರಿಸಾಟಿಯಲ್ಲ.

 

LEAVE A REPLY