ಸಂವಹನಾ ಕೌಶಲ್ಯದ ಮಹತ್ವ

ಬದುಕು ಬಂಗಾರ-160

ಉತ್ತಮ ಸಂವಹನಾ ಕೌಶಲ್ಯ ಅಥವಾ ಮಾತುಗಾರಿಕೆ ಜೀವನದಲ್ಲಿ ಯಶಸ್ಸಿಗಾಗಿ ಬಹಳ ಮುಖ್ಯ. ಒಬ್ಬ ವ್ಯಕ್ತಿಗೆ ವಾಹನವನ್ನು ಚೆನ್ನಾಗಿ ಚಲಾಯಿಸಲು ಬರದೇ ಇದ್ದರೂ ಆತ ತನ್ನ ಈ ದೌರ್ಬಲ್ಯವನ್ನು ಒಪ್ಪಲು ಸಿದ್ಧವಿರುವುದಿಲ್ಲ. ಅಂತೆಯೇ ಸಂವಹನದ ವಿಚಾರದಲ್ಲಿ ಕೂಡ. ಹೆಚ್ಚಿನವರು ತಮಗೆ ಸಾಕಷ್ಟು ಉತ್ತಮ ಸಂವಹನಾ ಕೌಶಲ್ಯವಿದೆ, ತಾವು ಮಾತಿನ ಮಲ್ಲರು ಎಂದೇ ಅಂದುಕೊಳ್ಳುತ್ತಾರೆ. ಆದರೆ ವಾಸ್ತವ ಸಂಗತಿ ಹಾಗಿರುವುದಿಲ್ಲ.

ಉತ್ತಮ ಸಂವಹನಾ ಕೌಶಲ್ಯದ ಕೊರತೆ ನಮ್ಮಲ್ಲಿ ಹಲವರಿಗಿದೆ. ಇದು ನಮಗೆ ತಿಳಿದಿರುವುದಿಲ್ಲ ಅಷ್ಟೇ, ಎನ್ನುತ್ತಾರೆ ತಜ್ಞರು.

ನಾವು ಪ್ರತಿಕ್ರಿಯಿಸುವ ರೀತಿಯಿಂದ, ನಮ್ಮ ಕೈ ಸನ್ನೆಗಳು ಮುಂತಾದವುಗಳನ್ನು ಗಮನಿಸಿ ಇತರರು ನಮ್ಮ ಮನಸ್ಸಿನಲ್ಲೇನಿದೆ ಎಂದು ತಿಳಿಯುತ್ತಾರೆಂದು ಹಲವರು ಅಂದುಕೊಳ್ಳುವ ಪರಿಣಾಮ ಅವರ ಮಾತುಗಳು ಎಲ್ಲೆಲ್ಲಿಗೋ ಸಾಗಿ ಬಿಡುತ್ತವೆ. ನಾವೊಂದು ಸುಳ್ಳು ಹೇಳಿದ ಕೂಡಲೇ ಅದನ್ನು ಇತರರು ಪತ್ತೆ ಹಚ್ಚುತ್ತಾರೆಂಬ ಯೋಚನೆಯೂ ನಮ್ಮ ಮಾತು ಲಯ ತಪ್ಪುವಂತೆ ಮಾಡುವ ಸಾಧ್ಯತೆಯಿದೆ.

ಉತ್ತಮ ಸಂವಹನಾ ಕೌಶಲ್ಯ ಎಲ್ಲರಲ್ಲೂ ಇರುವುದಿಲ್ಲ. ಆದರೂ ಪ್ರಯತ್ನ ಪಟ್ಟರೆ ಅಲ್ಪ ಯಶಸ್ಸು ಎಲ್ಲರ ಪಾಲಾಗಬಹುದು. ಆದರೆ ನಮ್ಮ ಕೆಲ ಪ್ರಮಾದಗಳಿಂದಾಗಿಯೇ ನಾವು ಆರಂಭದಲ್ಲಿಯೇ ಎಡವಿ ಬೀಳುವುದುಂಟು. ಕೆಲವೊಮ್ಮೆ ಬಿಸಿ ಬಿಸಿ ಚರ್ಚೆಗಳ ನಡುವೆಯೇ ನಾವು ಏನಾದರೂ ಅನಗತ್ಯ ಪದ ಪ್ರಯೋಗಿಸಿ ನಗೆಪಾಟಲಿಗೀಡಾಗುವ ಸಂಭವವೂ ಇದೆ. ಹೀಗೆ ಚರ್ಚೆಗಳು ನಡೆಯುತ್ತಿರುವಾಗ ಬಾಯಿ ತೂರಿಸಿ ವಾತಾವರಣವನ್ನು ಮತ್ತಷ್ಟು ಬಿಸಿಯೇರಿಸುವ ಅಗತ್ಯವಿಲ್ಲ.

ಕೆಲವರು ಮಾತನಾಡುವಾಗ ಕೆಲವೊಂದು ಪದಗಳನ್ನು ಪದೇ ಪದೇ ಬಳಸುವುದುಂಟು. ಇಂತಹ ಪದಗಳನ್ನು ಬಳಸಿದರೆ ತಾವು ಸ್ಮಾರ್ಟ್ ವ್ಯಕ್ತಿಗಳೆಂದು ಇತರರು ಅಂದುಕೊಳ್ಳುತ್ತಾರೆಂಬ ಭ್ರಮೆಯಿಂದ ಅವರು ಹೀಗೆ ಮಾಡುತ್ತಾರೆ. ನಿಮ್ಮ ಮಾತುಗಳ ಮೇಲೆ ಗಮನವಿರಲಿ. ಇಂತಹ ಪದಗಳನ್ನು ಪದೇ ಪದೇ ಬಳಸುವ ಗೋಜಿಗೆ ಹೋಗಬೇಡಿ.

ನಮ್ಮ ಜೀವನದ ಬಹಳಷ್ಟು ಸಮಯವನ್ನು ನಾವು ಮಾತನಾಡುವುದರಲ್ಲಿ ಕಳೆಯುತ್ತೇವೆ. ಉತ್ತಮ ಮಾತುಗಾರಿಕೆ ಹಾಗೂ ಉತ್ತಮ ಸಂವಹನಾ ಕೌಶಲ್ಯವನ್ನು ಹೊಂದುವುದೂ ಒಂದು ಕಲೆ. ಈ ಕಲೆ ಕರಗತ ಮಾಡಲು ಕಠಿಣ ಪರಿಶ್ರಮದ ಅಗತ್ಯವಿದೆ.