ಹೆದ್ದಾರಿ ಬದಿ ಚರಂಡಿ ಅವ್ಯವಸ್ಥೆ : ಸಾರ್ವಜನಿಕರಿಗೆ ನಿತ್ಯಯಾತನೆ

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ನಗರದ ಹೊರವಲಯದ ಸುರತ್ಕಲ್ ವ್ಯಾಪ್ತಿಯ ಕುಳಾಯಿ, ಹೊನ್ನಕಟ್ಟೆ, ಹೊಸಬೆಟ್ಟು, ಬೈಕಂಪಾಡಿ ಮತ್ತಿತರೆಡೆ ಹೆದ್ದಾರಿ ಬದಿ ಒಳ ಚರಂಡಿ ವ್ಯವಸ್ಥೆ ಇಲ್ಲದೆ ಹೋಟೆಲು ಕೊಳಚೆ ನೀರು ವ್ಯಾಪಕವಾಗಿ ಹರಿದು ದುರ್ವಾಸನೆಗೆ ಕಾರಣವಾಗುತ್ತಿದೆ. ಹೆದ್ದಾರಿಗಳ ಅವ್ಯವಸ್ಥೆ ಒಂದೆಡೆಯಾದರೆ ಹೆದ್ದಾರಿ ಪಕ್ಕದಲ್ಲಿ ಈ ರೀತಿಯ ದುರ್ವಾಸನೆ ಇನ್ನೊಂದು ರೀತಿಯ ನರಕಯಾತನೆಗೆ ಕಾರಣವಾಗಿದೆ.

ಹೆದ್ದಾರಿ ಪಕ್ಕದಲ್ಲಿ ಇದೀಗ ಅಲ್ಲಲ್ಲಿ ಫಲಾಹಾರ ಮಂದಿರ, ಡಾಬಾಗಳು ನಿರ್ಮಾಣಗೊಂಡಿದ್ದು, ತ್ಯಾಜ್ಯ ಹಾಗೂ ಕಲುಷಿತ ನೀರನ್ನು ಬಿಡಲು ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಸೃಷ್ಟಿಯಾಗಿದೆ. ಬಳಸಿದ ನೀರನ್ನು ನೇರವಾಗಿ ಮಳೆ ನೀರು ಹರಿಯುವ ತೋಡುಗಳಲ್ಲಿ ಬಿಡಲಾಗುತ್ತಿದೆ. ಇದರಿಂದ ಪರಿಸರ ವಾಸನೆಯಲ್ಲದೇ ಸಾಂಕ್ರಾಮಿಕ ರೋಗ ರುಜಿನಕ್ಕೂ ಕಾರಣವಾಗುತ್ತಿದೆ.

ಇನ್ನು ಪಾದಚಾರಿಗಳ ಗೋಳನ್ನಂತೂ ಕೇಳುವವರಿಲ್ಲ. ಪ್ರತೀ ಬಾರಿ ಮೂಗು ಮುಚ್ಚಿಕೊಂಡೇ ನಡೆದಾಡಬೇಕಾಗಿದೆ.

ಹೆದ್ದಾರಿ ಪಕ್ಕದಲ್ಲಿ ಇಷ್ಟೇ ಅಂತರದಲ್ಲಿ ಕಟ್ಟಡ, ಅಂಗಡಿ, ಡಾಬಾ ಇರಬೇಕೆಂಬ ಕಾನೂನು ಇದೆ. ಆದರೆ ಅದೆಲ್ಲವನ್ನೂ ಮೀರಿ ಇಲ್ಲಿ ರಸ್ತೆ ಪಕ್ಕದಲ್ಲೇ ಕಾಣಬಹುದು. ಕ್ರಮ ಕೈಗೊಳ್ಳಬೇಕಾದ ಹೆದ್ದಾರಿ ಇಲಾಖೆ ಮೌನವಾಗಿದೆ. ತ್ಯಾಜ್ಯ ಸಂಗ್ರಹಣೆ ಮಾಡಲು ಪಾಲಿಕೆ ಕೂಡಾ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ. ಹೀಗಾಗಿ ಅವ್ಯವಸ್ಥೆ ಕಾಡುತ್ತಿದೆ ಎಂದು ಸ್ಥಳೀಯ ನಿವಾಸಿ ರಘುರಾಮ್ ದೂರಿದ್ದಾರೆ.

“ಪಾಲಿಕೆ ಆಡಳಿತಕ್ಕೆ ಪತ್ರ ಬರೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ತೆರಿಗೆ ಸಂಗ್ರಹದ ಬಗ್ಗೆ ಲೆಕ್ಕಾಚಾರ ಮಾಡುವ ಪಾಲಿಕೆ ಈ ಅವ್ಯವಸ್ಥೆಯನ್ನು ಹೆದ್ದಾರಿ ಇಲಾಖೆಯ ಗಮನಕ್ಕೆ ತಂದು ಪಾದಚಾರಿಗಳು, ಸ್ಥಳೀಯರಿಗೆ ಓಡಾಡುವ ವಾತಾವರಣ ನಿರ್ಮಿಸಬೇಕಾಗಿದೆ. ಇನ್ನಾದರೂ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ” ಎನ್ನುತ್ತಾರೆ ಅವರು.

“ಡಾಬಾ, ಹೋಟೆಲು ಮತ್ತಿತರ ತ್ಯಾಜ್ಯ ನೀರು ರಸ್ತೆ ಬದಿ ಬಿಡುವಂತಿಲ್ಲ. ಇದಕ್ಕೆ ಅಂಗಡಿ ಮಾಲಕರೇ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು. ಪರಿಸರ ಮಾಲಿನ್ಯ ಮಾಡುವವರಿಗೆ ಪರಿಸರ ಇಲಾಖೆಯಿಂದ ನೋಟಿಸ್ ಕಳುಹಿಸಿ ಪಾಲಿಕೆಯಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಥಳೀಯ ಕಾರ್ಪೊರೇಟರ್ ಅಶೋಕ್ ಶೆಟ್ಟಿ ಹೇಳಿದ್ದಾರೆ.

LEAVE A REPLY