ಅಮಾನತ್ತಾದ `ಆಪ್ತ’ ಚಿಕ್ಕರಾಯಪ್ಪ ಬಗ್ಗೆ ಏನೂ ಗೊತ್ತಿಲ್ಲ ಎಂದ ಸಿದ್ದು

ಟಿ ಎನ್ ಚಿಕ್ಕರಾಯಪ್ಪ, ಸಿದ್ದರಾಮಯ್ಯ

ಬೆಂಗಳೂರು : ಭ್ರಷ್ಟಾಚಾರದ ಮೂಲಕ ಕೋಟ್ಯಂತರ ರೂ ಮೊತ್ತದೊಂದಿಗೆ ಸಿಕ್ಕಿಬಿದ್ದಿರುವ ಕಾವೇರಿ ನೀರಾವರಿ ನಿಗಮದ ಅಮಾನತಾಗಿರುವ ಆಡಳಿತ ನಿರ್ದೇಶಕ, ಮಹಾಭ್ರಷ್ಟ ಟಿ ಎನ್ ಚಿಕ್ಕರಾಯಪ್ಪನ ಬಗ್ಗೆ ತನಗೇನೂ ಗೊತ್ತಿಲ್ಲವೆಂದು ಸೀಎಂ ಸಿದ್ದರಾಮಯ್ಯ ಹೇಳಿದ್ದಾರೆ. ಚಿಕ್ಕರಾಯಪ್ಪ ವಿರುದ್ಧ ಹಲವಾರು ಭ್ರಷ್ಟಾಚಾರ ಆರೋಪಗಳಿದ್ದು, ಈತ ಸೀಎಂ ಆಪ್ತನೆಂಬ ಆರೋಪ ಕೇಳಿಬಂದಿದೆ.

ಈತ 2010ರಲ್ಲಿ 3300 ಕೋಟಿ ರೂ ಬಿಬಿಎಂಪಿ ಟೆಂಡರ್ ಹಗರಣದಲ್ಲಿ ಶಾಮೀಲಾಗಿದ್ದಾನೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕೆಲಸ ಮಾಡುತ್ತಿದ್ದಾಗ ಹಲವು ಭ್ರಷ್ಟಾಚಾರ ಆರೋಪ ಹೊಂದಿದ್ದು, ಈತನ ವಿರುದ್ಧ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣಗಳು ನೆನೆಗುದಿಗೆ ಬಿದ್ದಿವೆ.

ಸಿದ್ದರಾಮಯ್ಯ ಅಧಿಕಾರ ಸ್ವೀಕರಿಸಿದ ಆರು ತಿಂಗಳ ಬಳಿಕ ಭಾರೀ ವಿರೋಧವಿದ್ದ ಹೊರತಾಗಿಯೂ ಕುರುಬ ಸಮುದಾಯದ ಈತ ಪಿಡಬ್ಲೂಡಿಗೆ ಕಾರ್ಯದರ್ಶಿಯಾಗಿ ನಿಯುಕ್ತಗೊಂಡಿದ್ದ. ಕಾವೇರಿ ನೀರಾವರಿ ನಿಗಮ ನಿಯಮಿತದ ಆಡಳಿತ ನಿರ್ದೇಶಕನಾಗುವ ಮುಂಚೆ ಪಿಡಬ್ಲ್ಯೂಡಿಯಲ್ಲಿ ಎರಡು ವರ್ಷ ಕೆಲಸ ಮಾಡಿದ್ದ.

ಕೆಪಿಎಸ್ಸಿ ಪರೀಕ್ಷೆಗೆ ಹಾಜರಾಗಿದ್ದ ಈತ ಎಇಇಯಾಗಿ ಆಯ್ಕೆಯಾಗಿದ್ದು, ಮೈಸೂರು ಜಿ ಪಂ.ಗೆ ಎಇಇಯಾಗಿ ನೇಮಕಗೊಂಡಿದ್ದ. 1996ರಲ್ಲಿ ಇಇಯಾಗಿ ಭಡ್ತಿ ಹೊಂದಿದ್ದ. ಬಳಿಕ ಬಿಡಿಎ ಸೇರಿಕೊಂಡಿದ್ದ.

ಈತನ ವಿರುದ್ಧ ದಾಖಲಾಗಿರುವ ಆರೋಪಗಳು :

  • ಬನ್ನೇರುಘಟ್ಟ ರಸ್ತೆಯಜಾಗ ಕಬಳಿಸಿರುವ ಖಾಸಗಿ ಬಿಲ್ಡರೊಬ್ಬಗೆ ನೆರವಾಗಿದ್ದಾನೆ.
  • ಎಸ್ ಎಂ ಕೃಷ್ಣ ಆಡಳಿತಾವಧಿಯಲ್ಲಿ ಸಾಮಾಜಿಕ ಅರಣ್ಯ ಯೋಜನೆಯೊಂದರಲ್ಲಿ 19 ಕೋಟಿ ರೂ ಅವ್ಯವಹಾರ ನಡೆಸಿದ್ದ. ಕೇಸು ಲೋಕಾಯುಕ್ತದಲ್ಲಿದೆ.
  • ಬಿಡಿಎ ಸದಸ್ಯ-ಇಂಜಿನಿಯರ್ ಆಗಿದ್ದ ವೇಳೆ ಈತ ಟೆಂಡರುಗಳಿಗಾಗಿ ನಕಲಿ ದಾಖಲೆಪತ್ರ ಮತ್ತು ಬ್ಯಾಂಕ್ ಗ್ಯಾರಂಟಿ ಸೃಷ್ಟಿಸಿದ್ದ.
  • ಕರ್ನಾಟಕ ಪಾರದರ್ಶಕ ಕಾಯ್ದೆ ಉಲ್ಲಂಘಿಸಿ ಕೋಟ್ಯಂತರ ರೂ ಹಗರಣ ನಡೆಸಿದ್ದಾನೆ.