ವಲಸಿಗ ಸಿದ್ದರಾಮಯ್ಯರಿಂದ ರಾಜಕೀಯ ಪಕ್ಷ ಕಟ್ಟಲಾಗಿದೆಯೇ : ಕುಮಾರಣ್ಣ ಲೇವಡಿ

ಬೆಂಗಳೂರು : ಸೀಎಂ ಸಿದ್ದರಾಮಯ್ಯ ಯಾವೊಂದು ರಾಜಕೀಯ ಪಕ್ಷ ಕಟ್ಟಿಲ್ಲ ಅಥವಾ ಪಕ್ಷ ಕಟ್ಟುವ ತಾಕತ್ತಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಲೇವಡಿ ಮಾಡಿದರು. ಅವರು ಕಾಂಗ್ರೆಸ್ಸಿಗೆ ವಲಸೆ ಬಂದು ಅಧಿಕಾರ ಪಡೆದುಕೊಂಡಿದ್ದಾರೆ ಎಂದವರು ಟೀಕಿಸಿದರು.

ರಾಜ್ಯದಲ್ಲಿ ಜೆಡಿಎಸ್ ಇನ್ನು ಅಧಿಕಾರಕ್ಕೆ ಬರುವುದಿಲ್ಲ ಎಂದಿರುವ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಯಾಗಿ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, “2004ರ ಚುನಾವಣೆಯಲ್ಲಿ ನಮ್ಮ ಹಣ ಮತ್ತು ಪ್ರಯತ್ನವಿತ್ತು. ಆಗ ಬ್ಯಾನರುಗಳಲ್ಲಿ ಮತ್ತು ಪೋಸ್ಟರುಗಳಲ್ಲಿ ತನ್ನ ಪ್ರತಿಷ್ಠೆ ಕಂಡು ಬರದಾಗ ಸಿದ್ದರಾಮಯ್ಯ ವಿಚಲಿತರಾಗಿದ್ದರು. ಆಯ್ದ ಕೆಲವು ಕ್ಷೇತ್ರಗಳಲ್ಲಿ ಮಾತ್ರ ಅವರ ಪ್ರಭಾವವಿದೆ. ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ 10 ಸೀಟು ಗೆಲ್ಲಲು ಆಗಿರಲಿಲ್ಲ. 2013ರಲ್ಲಿ ನಾನು ಏಕಾಂಗಿಯಾಗಿ 40 ಸೀಟು ಗೆಲ್ಲಿಸುವಂತೆ ಮಾಡಿದ್ದೆ” ಎಂದರು.

“ಪರಮೇಶ್ವರ ಹೆಸರಿಗೆ ಮಾತ್ರ ಗೃಹ ಸಚಿವರಾಗಿದ್ದಾರೆ. ದಲಿತರಾಗಿರುವ ಅವರನ್ನು ಸಿದ್ದರಾಮಯ್ಯ ರಬ್ಬರ್ ಸ್ಟಾಂಪ್ ತರಹ ಬಳಸಿಕೊಳ್ಳುತ್ತಿದ್ದಾರೆ. ಒಂದೊಮ್ಮೆ ಅವರಿಗೆ ಸ್ವ-ಗೌರವವೆಂಬುದು ಇದ್ದಿದ್ದರೆ ತಕ್ಷಣ ರಾಜೀನಾಮೆ ನೀಡಬೇಕು” ಎಂದು ಕುಮಾರಸ್ವಾಮಿ ಹೇಳಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ, “ಚಿತ್ರ ನಟ ರಾಜಕುಮಾರ್ ಮೃತಪಟ್ಟಿದ್ದಾಗ, ರಾಜ್ಯದಲ್ಲಿ ಹದಗೆಟ್ಟಿದ್ದ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಿಸಿ, ಶಾಂತಿ ಕಾಪಾಡಲು ಕುಮಾರಸ್ವಾಮಿ ವಿಫಲರಾಗಿದ್ದರು. ಹೆಚ್ಚೇಕೆ, ನಟನ ಅಂತ್ಯಸಂಸ್ಕಾರವೂ ಶಾಂತಿಪೂರ್ಣವಾಗಿ ನಡೆದಿಲ್ಲ. ಆಗ ತನ್ನಲ್ಲಿದ್ದ ಗೃಹ ಖಾತೆಯಿಂದ ಕುಮಾರಸ್ವಾಮಿ ಮಾಡಿದ್ದಾದರೂ ಏನು” ಎಂದು ಸವಾಲೆಸೆದಿದ್ದಾರೆ.