ಇತರ ರಾಜ್ಯಗಳಿಂದ ಪ್ರಭಾವಿತವಾಗಿ ಚುನಾವಣಾ ಪಿ ಆರ್ ತಂತ್ರಜ್ಞರನ್ನು ನೇಮಿಸಲಿರುವ ಸಿದ್ದು ಸರಕಾರ

ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ತಾನು ರಾಜ್ಯದಲ್ಲಿ ಕೈಗೊಂಡ ಕಲ್ಯಾಣ ಕಾರ್ಯಕ್ರಮಗಳನ್ನು ಮತ್ತಷ್ಟು ಜನಪ್ರಿಯಗೊಳಿಸಿ ಮತದಾರರನ್ನು ಸೆಳೆಯುವ ಪ್ರಯತ್ನದ ಭಾಗವಾಗಿ ಉತ್ತರ ಪ್ರದೇಶ, ಬಿಹಾರ್ ಹಾಗೂ ದೆಹಲಿ ಉದಾಹರಣೆಗಳಿಂದ ಪ್ರೇರಿತವಾಗಿ ಚುನಾವಣಾ ತಂತ್ರಜ್ಞರನ್ನು ಹಾಗೂ ಪಿ ಆರ್ ಸಂಸ್ಥೆಗಳನ್ನು ನಿಯೋಜಿಸುವ ಬಗ್ಗೆ ಸಿದ್ದರಾಮಯ್ಯ ಸರಕಾರ ಗಂಭೀರವಾಗಿ ಯೋಚಿಸುತ್ತಿದೆ

ಪಕ್ಷವು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಚುನಾವಣಾ ತಂತ್ರಜ್ಞರನ್ನು ಅಥವಾ ಬೇರೆ ಪರಿಣತರನ್ನು ಕರ್ನಾಟಕಕ್ಕೂ ಆಯ್ಕೆ ಮಾಡುವ ಸಂಭವವಿದೆಯೆಂದು ಹೇಳಲಾಗುತ್ತಿದೆ. ಎಲ್ಲಾ ಕ್ಷೇತ್ರಗಳ ಸÀಮೀಕ್ಷೆ ನಡೆಸಿ, ಮತದಾರರ ಮನದಿಂಗಿತವನ್ನು ಅರಿತು ಅಂತೆಯೇ ಕಾರ್ಯನಿರ್ವಹಿಸುವುದು ಕಾಂಗ್ರೆಸ್ ಸರಕಾರದ ಉದ್ದೇಶವಾಗಿದೆ.

ರಾಜ್ಯದ ಕಾಂಗ್ರೆಸ್ ಸರಕಾರ ಈಗಾಗಲೇ ತನ್ನ 70ಕ್ಕೂ ಅಧಿಕ ಚುನಾವಣಾ ಪೂರ್ವ ಭರವಸೆಗಳನ್ನು ಈಡೇರಿಸಿದ್ದು  ಇನ್ನುಳಿದ 70ಕ್ಕೂ ಹೆಚ್ಚಿನ ಆಶ್ವಾಸನೆಗಳನ್ನು ಮುಂದಿನೆರಡು ಬಜೆಟ್ಟುಗಳಲ್ಲಿ ಈಡೇರಿಸಿ, ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿ ನಂತರ ಜನರ ಮುಂದೆ ಹೋಗಲು ತೀರ್ಮಾನಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಜ್ಯ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ದಿನೇಶ್ ಗುಂಡೂರಾವ್ “ಚುನಾವಣಾ ತಂತ್ರಜ್ಞ  ಹಾಗೂ ಪಿ ಆರ್ ಸಂಸ್ಥೆಗಳ ನೇಮಕ ವಿಚಾರದಲ್ಲಿ  ರಾಜ್ಯ ಸರಕಾರ ಅಂತಿಮ ನಿರ್ಧಾರ ಕೈಗೊಳ್ಳುವುದೇ ಹೊರತು ಪಕ್ಷವಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.