ನೇರ ನಡೆನುಡಿಯಿಂದ ರಾಹುಲ್ ವಿಶ್ವಾಸ ಸಂಪಾದಿಸಿದ ಸಿದ್ರಾಮಯ್ಯ

ಕಾಂಗ್ರೆಸ್ ಉಪಾಧ್ಯಕ್ಷನಿಂದ ದೊರೆಯಿತು ಸೀಎಂಗೆ ಆತ್ಮೀಯ ಆಲಿಂಗನ

ಬೆಂಗಳೂರು : ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ನಾಮಪತ್ರ ಸಲ್ಲಿಸುವ ಸಂದರ್ಭ ಅವರು ಅಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಆದರದಿಂದ ಆಲಂಗಿಸಿರುವುದು ಸಿದ್ದರಾಮಯ್ಯ ಕಾಂಗ್ರೆಸ್ ಉಪಾಧ್ಯಕ್ಷರೊಂದಿಗೆ ಹೊಂದಿರುವ ಅವಿನಾಭಾವ ಸಂಬಂಧದ ದ್ಯೋತಕವಾಗಿದೆ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.

ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷ ಸೇರಲು ಸೋನಿಯಾ ಗಾಂಧಿ ಅವರ ಮುಂದಾಳತ್ವ ಕಾರಣವಾಗಿದ್ದರೂ ಕಳೆದೆರಡು ವರ್ಷಗಳಲ್ಲಿ ಅವರು ರಾಹುಲ್ ಗಾಂಧಿ ಅವರಿಗೆ ಅದೆಷ್ಟು ಆತ್ಮೀಯರಾಗಿ ಬಿಟ್ಟಿದ್ದಾರೆಂದರೆ ಸಿದ್ದರಾಮಯ್ಯಗೆ ಕರ್ನಾಟಕದ ಆಡಳಿತದ ವಿಚಾರದಲ್ಲಿ ಸಂಪೂರ್ಣ ಸ್ವಾತಂತ್ರ್ಯವನ್ನು ರಾಹುಲ್ ನೀಡಿದ್ದಾರೆ ಎಂದು ಪಕ್ಷದ ಮೂಲಗಳೇ ತಿಳಿಸುತ್ತವೆ.

“ಸಿದ್ದರಾಮಯ್ಯ ಅವರ ಕಾರ್ಯಶೈಲಿಯ ಮೇಲೆಯೇ ಎಲ್ಲವೂ ಅವಲಂಬಿತವಾಗಿದೆ. ಅವರು ಹೈಕಮಾಂಡ್ ಎದುರು ಇತರ ನಾಯಕರಂತೆ ವಿನೀತರಾಗಿ ತಲೆತಗ್ಗಿಸಿ ನಿಲ್ಲುವವರಾಗಿರದೆ ತಮ್ಮ ಮನಸ್ಸಿಗೆ ತೋಚಿದಂತೆ ನೇರವಾಗಿ ಹೇಳಿ ಬಿಡುವವರಾಗಿರುವುದೇ ಇದಕ್ಕೆ ಕಾರಣವಾಗಿದೆ. ಒಂದು ಕಾಲದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯಾಗಿ ನೇಮಕಗೊಳಿಸಬೇಕೆಂಬ ನಿರ್ಧಾರಕ್ಕೆ ಹೈಕಮಾಂಡ್ ಬಂದಿದ್ದರೂ ಸಿದ್ದರಾಮಯ್ಯ ಅವರು ಇದಕ್ಕೆ ಅಸಮ್ಮತಿಯನ್ನು ನೇರವಾಗಿಯೇ ಸೂಚಿಸಿದ್ದರು” ಎಂದು ಕೆಲ ಪಕ್ಷ ನಾಯಕರು ವಿವರಿಸುತ್ತಾರೆ.

ಪಕ್ಷದೊಳಗಿನ ಭಿನ್ನಮತವನ್ನು ಹತೋಟಿಯಲ್ಲಿಟ್ಟುಕೊಂಡು, ಬಿಜೆಪಿಯಿಂದ ಏನೇ ಸಮಸ್ಯೆ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಿರುವ ಸಿದ್ದರಾಮಯ್ಯ ಅವರ ಕಾರ್ಯಶೈಲಿ ರಾಹುಲ್ ಗಾಂಧಿಗೆ ಬಹಳ ಇಷ್ಟವಾಗಿದೆ ಎನ್ನುತ್ತವೆ ಮೂಲಗಳು.

ಸಿದ್ದು ಸರಳತೆ ರಾಹುಲಗೆ ಇಷ್ಟ ಒಮ್ಮೆ ಮಂಗಳೂರಿನಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ರಾಹುಲ್ ಜತೆ ಪ್ರಯಾಣಿಸುತ್ತಿದ್ದ ಸಿದ್ದರಾಮಯ್ಯ ಕಾಲು ಚಾಚಿ ನಿದ್ದೆಗೆ ಜಾರಿ ಬಿಟ್ಟಿದ್ದರು. ಅವರ ಜತೆಗಿದ್ದ ಪರಮೇಶ್ವರ್ ಅವರಿಗೆ ಇದರಿಂದ ಸ್ವಲ್ಪ ಇರಿಸುಮುರಿಸು ಉಂಟಾಯಿತಂತೆ. ರಾಹುಲ್ ಅವರು ಸಿದ್ದರಾಮಯ್ಯನವರನ್ನು ತಟ್ಟಿ ಎಬ್ಬಿಸಲು ಯತ್ನಿಸಿದರಲ್ಲದೆ ಟೀ ಅಥವಾ ಕಾಫಿ ಬೇಕೇ ಎಂದೂ ಕೇಳಿದ್ದರು. ಆದರೆ ಸಿದ್ದರಾಮಯ್ಯ ಅವರಂತೂ ಗಾಢ ನಿದ್ದೆಯಲ್ಲಿದ್ದರಂತೆ. ಹೆಲಿಕಾಪ್ಟರ್ ಲ್ಯಾಂಡ್ ಆದ ನಂತರ ರಾಹುಲ್ ಅವರು `ವಿ’ ಸಂಜ್ಞೆ ಮಾಡಿ ತನಗೆ ಅವರ ನೇರ ನಡೆ ನುಡಿ ಇಷ್ಟವಾಯಿತೆಂದು ಸೂಚಿಸಿದರೆಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

LEAVE A REPLY