`ಕಳಂಕಿತರ ಬಗ್ಗೆ ಸಿದ್ಧರಾಮಯ್ಯ ಮೃದು ಧೋರಣೆ’

ಕಾಂಗ್ರೆಸ್ ಪಕ್ಷದಲ್ಲಿ ಹಿಂದೆ ಇದ್ದಂತೆ ಚಿಂತಕರ ಚಾವಡಿ ಇಲ್ಲದಿರುವುದರ ಬಗ್ಗೆ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ಮತ್ತು ಹಿರಿಯ ನಾಯಕ ವಿಶ್ವನಾಥ್ ವಿಷಾದ ವ್ಯಕ್ತಪಡಿಸುತ್ತಾರೆ. ತಮ್ಮ ನೇರ ಹಾಗೂ ದಿಟ್ಟ ಅಭಿಪ್ರಾಯಗಳಿಗೆ ಹೆಸರಾದ ವಿಶ್ವನಾಥ್, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಎಲ್ಲ ಪ್ರಮುಖ ನಿರ್ಧಾರಗಳನ್ನೂ ಏಕಪಕ್ಷೀಯವಾಗಿ ಕೈಗೊಳ್ಳುವುದರ ಬಗ್ಗೆಯೂ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ. ವಿಶ್ವನಾಥ್ ಅವರೊಡನೆ ನಡೆಸಲಾದ ಸಂದರ್ಶನ ಇಲ್ಲಿದೆ.


  • ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಹೇಗಿದೆ ?

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಇನ್ನೂ ಮುಂಚೂಣಿಯಲ್ಲಿದೆ. ಕೆಲವು ಘಟನೆಗಳು ಹಿನ್ನಡೆ ಉಂಟುಮಾಡಿರಬಹುದು. ಆದರೆ ಪಕ್ಷ ಪುನಃ ಅಧಿಕಾರಕ್ಕೆ ಬರುತ್ತದೆ.


  • ವಾಚು ಪ್ರಕರಣದ ನಂತರ ಸರ್ಕಾರ ಮತ್ತು ಎಲ್ಲ ಸಚಿವರು ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದಾರೆ ಎನಿಸುವುದಿಲ್ಲವೇ ?

ಈ ಎಲ್ಲ ಘಟನೆಗಳು ಖಂಡಿತವಾಗಿಯೂ ಪಕ್ಷಕ್ಕೆ ಮುಜುಗರ ಉಂಟುಮಾಡಿವೆ. ಮುಖ್ಯಮಂತ್ರಿ  ಸಿದ್ಧರಾಮಯ್ಯ ನಿಜಕ್ಕೂ ಒಳ್ಳೆಯವರು. ತಮ್ಮ ಸಹೋದ್ಯೋಗಿಗಳಿಗೆ ಒಳ್ಳೆಯದಾಗಲಿ ಎಂದು ಬಯಸುವವರು. ಹಾಗಾಗಿಯೇ ತನ್ವೀರ್ ಸೇಠ್ ಮತ್ತು ಮೇಟಿ ಪ್ರಕರಣದಲ್ಲಿ ಮೃದು ಧೋರಣೆ ತಾಳುವುದೇ ಅಲ್ಲದೆ ಕ್ರಮ ಜರುಗಿಸಲು ವಿಳಂಬ ಮಾಡುತ್ತಿದ್ದಾರೆ. ಯಾವುದೇ ಸಚಿವರ ವಿರುದ್ಧ ಆರೋಪಗಳು ಬಂದಾಗ ಸಾಕ್ಷ್ಯಾಧಾರಗಳು ಬಲವಾಗಿದ್ದರೆ ಕೂಡಲೇ ಅವರ ರಾಜೀನಾಮೆ ಪಡೆದು ತನಿಖೆಗೆ ಆದೇಶಿಸುವುದು ಒಳಿತು. ನಿರಪರಾಧಿ ಎಂದು ಸಾಬೀತಾದರೆ ಸಚಿವ ಸಂಪುಟಕ್ಕೆ ಮರಳಿ ಸೇರಿಸಿಕೊಳ್ಳಬೇಕು.


  • ತನ್ವೀರ್ ಸೇಠ್ ಪ್ರಕರಣದ ಬಗ್ಗೆ ನಿಮ್ಮ ಅಭಿಪ್ರಾಯವೇನು ?

ಸರ್ಕಾರ ಮತ್ತು ಆಡಳಿತ ವ್ಯವಸ್ಥೆಯ ಮೌಲ್ಯಗಳೊಡನೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸೇಠ್ ಸ್ವತಃ ರಾಜೀನಾಮೆ ನೀಡಬೇಕಿತ್ತು. ಮೇಟಿ ಪ್ರಕರಣದಲ್ಲೂ ಸಹ ಪಕ್ಷ ಮತ್ತು ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟಾಗಿರುವುದು ನಿಜ.


  • ಸಚಿವ ಸಂಪುಟ ಪುನಾರಚನೆಯಲ್ಲಿ ಪೂರ್ಣ ಸ್ವಾತಂತ್ರ್ಯ ಹೊಂದಿದ್ದ ಸಿದ್ಧರಾಮಯ್ಯ ತನ್ಮೂಲಕ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಸಾಧ್ಯವೇ ?

ಸಂಪುಟ ಪುನಾರಚನೆಯಲ್ಲಿ ಜಿಲ್ಲೆ, ಪ್ರದೇಶ ಮತ್ತು ಜಾತಿವಾರು ವಿಂಗಡನೆ ಮಾಡುವುದೇ ಅಲ್ಲದೆ 123 ಶಾಸಕರ ಪೈಕಿ ಉತ್ತಮ ಶಾಸಕರನ್ನು ಆಯ್ಕೆ ಮಾಡುವುದು ಮುಖ್ಯಮಂತ್ರಿಯ ಜವಾಬ್ದಾರಿ. ಎಲ್ಲಿ ಎಡವಿದ್ದಾರೆ ಎಂದು ಮುಖ್ಯಮಂತ್ರಿಗಳು ಹೈಕಮಾಂಡಿಗೆ ವಿವರಣೆ ನೀಡಬೇಕಿದೆ. ಈ ಸಂಪುಟವನ್ನೇ ಇಟ್ಟುಕೊಂಡು ಮರಳಿ ಅಧಿಕಾರ ಪಡೆಯುವುದು ಕಷ್ಟವಾಗುತ್ತದೆ.


  • ತಾವು ಅಂದುಕೊಂಡಿದ್ದನ್ನು ಸಾಧಿಸಲು ಸಿದ್ಧರಾಮಯ್ಯ ಅವರಿಗೆ ಏಕೆ ಸಾಧ್ಯವಾಗಿಲ್ಲ ?

ಸಿದ್ಧರಾಮಯ್ಯ ಹಲವು ಸಾಧನೆಗಳನ್ನು ಮಾಡಿದ್ದಾರೆ. ಸರ್ಕಾರ ಹಲವಾರು ವಿನೂತನ ಯೋಜನೆಗಳನ್ನು ಜಾರಿಗೊಳಿಸಿದೆ. ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.  ಆದರೆ ಸಂಪುಟ ಸದಸ್ಯರು, ಸ್ಥಳೀಯ ನಾಯಕರು ಮತ್ತು ಕೆಳಹಂತದ ಕಾರ್ಯಕರ್ತರು ಸರ್ಕಾರದ ಸಾಧನೆಗಳನ್ನು ಮತ್ತು ಯೋಜನೆಗಳನ್ನು ಜನತೆಯ ಬಳಿ ಕೊಂಡೊಯ್ಯಲು ವಿಫಲರಾಗಿದ್ದಾರೆ. ಪಕ್ಷ ಮತ್ತು ಸರ್ಕಾರವನ್ನು ಒಟ್ಟಿಗೆ ಕೊಂಡೊಯ್ಯುವುದರಲ್ಲಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ. ಪರಮೇಶ್ವರ್ ಪಕ್ಷದ ನಾಯಕತ್ವವನ್ನೂ ವಹಿಸಿಕೊಂಡು ಸಚಿವರಾಗಿ ಮುಂದುವರೆಯುವುದು ಸರಿಯಲ್ಲ. ಮೇಲಾಗಿ ಸಿದ್ಧರಾಮಯ್ಯ ಅನೇಕ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತಾವೇ ಕೈಗೊಳ್ಳುವುದು ತಪ್ಪಾಗುತ್ತದೆ.


  • ಸ್ವಾತಂತ್ರ್ಯ ಹೋರಾಟಗಾರರಾದ ದೊರೆಸ್ವಾಮಿಯವರನ್ನು ಹೊರತುಪಡಿಸಿ ಏಕೆ ಬುದ್ಧಿಜೀವಿಗಳು ಮಾತನಾಡುತ್ತಿಲ್ಲ ?

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸರ್ಕಾರದ ಸಾಧನೆ ಮತ್ತು ವೈಫಲ್ಯಗಳನ್ನು ಕುರಿತು ಚರ್ಚೆ ನಡೆಯಬೇಕು. ಆರೋಗ್ಯಕರ ಸಂವಾದ ಇರಬೇಕು. ಆದರೆ ಯಾರೂ ಮಾತನಾಡುತ್ತಿಲ್ಲ. ಯಾವುದೇ ಸಾಹಿತಿಯೂ ಮಾತನಾಡುತ್ತಿಲ್ಲ. ಬಹುತೇಕ ಸಾಹಿತಿಗಳು ಸರ್ಕಾರದ ಪರವಾಗಿದ್ದಂತೆ ತೋರುತ್ತದೆ. ಆಡಳಿತ ವ್ಯವಸ್ಥೆಯಲ್ಲಿ ಲೇಖನಿಗೆ ಮಹತ್ವದ ಪಾತ್ರ ಇರುತ್ತದೆ.  ಮಾಧ್ಯಮ ಮತ್ತು ಸಾಹಿತಿ ಕಲಾವಿದರು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ವಿರೋಧ ಪಕ್ಷಗಳೂ ಸಹ ಮಾತನಾಡುತ್ತಿಲ್ಲ. ಜೆಡಿಎಸ್ ಸಹ ಹಗರಣಗಳನ್ನು ಬಯಲು ಮಾಡುವುದಾಗಿ ಹೇಳುತ್ತದೆ, ಆದರೆ ಏನೂ ಮಾಡುತ್ತಿಲ್ಲ.


  • ಪಕ್ಷದ ಭವಿಷ್ಯದ ಬಗ್ಗೆ ಏನು ಹೇಳುವಿರಿ ?

ಪಕ್ಷವನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬೇಕು. ನಮಗೆ ಇನ್ನೂ ಒಂದೂವರೆ ವರ್ಷದ ಅವಕಾಶವಿದೆ. 2018ರ ಚುನಾವಣೆಗಳ ಮುನ್ನ ನಮ್ಮ ತಪ್ಪುಗಳನ್ನು ಸರಿಪಡಿಸಿಕೊಂಡು ಜನರ ಬಳಿ ಕ್ಷಮೆ ಯಾಚಿಸಬೇಕು. ಏನೂ ಆಗಿಯೇ ಇಲ್ಲ ಎಂದು ಸುಮ್ಮನಾದರೆ ಮಾರ್ಗ ಕಷ್ಟವಾಗಬಹುದು.


  • ಹಿರಿಯ ಕಾಂಗ್ರೆಸ್ ಸದಸ್ಯರ ಅದ್ಯತೆಗಳೇನು ?

ಪಕ್ಷವಾಗಲಿ ಸರ್ಕಾರವಾಗಲಿ ಹಿರಿಯ ನಾಯಕರಿಗೆ ಕ್ಯಾರೇ ಅನ್ನುವುದಿಲ್ಲ. ಚರ್ಚೆಗೂ ಕರೆಯುವುದಿಲ್ಲ. ಹಿರಿಯ ನಾಯಕರಾಗಿ ಪಕ್ಷದ ತಪ್ಪು ಒಪ್ಪುಗಳನ್ನು  ಎತ್ತಿ ತೋರಿಸುವುದು ನಮ್ಮ ಕರ್ತವ್ಯ. ತಪ್ಪುಗಳನ್ನು ಸರಪಡಿಸಿಕೊಳ್ಳಲು ಸರ್ಕಾರ ಸಿದ್ಧವಾಗದಿದ್ದರೆ ಏನೂ ಮಾಡಲಾಗದು.