ಇಂದು ಉತ್ತರ ಕನ್ನಡದಲ್ಲಿ ಸಿದ್ದರಾಮಯ್ಯ ಪ್ರವಾಸ

ನಮ್ಮ ಪ್ರತಿನಿಧಿ ವರದಿ

ಕಾರವಾರ : ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಾಲ್ಕುವರೆ ವರ್ಷಗಳ ನಂತರ ನಾಡ ದೊರೆ ಸಿದ್ಧರಾಮಯ್ಯ ಅವರು ಇಂದು ಉತ್ತರ ಕನ್ನqಕ್ಕೆ  ಆಗಮಿಸುತ್ತಿದ್ದಾರೆ. ಜಿಲ್ಲೆಗೆ ಮುಖ್ಯಮಂತ್ರಿ ಯಾವ ಕೊಡುಗೆ ನೀಡಬಹುದೆಂಬ ನಿರೀಕ್ಷೆಯಿದೆ.

ಭಟ್ಕಳದಲ್ಲಿ ಆರಂಭವಾದ ಮುಖ್ಯಮಂತ್ರಿಗಳ ಜಿಲ್ಲಾ ಪ್ರವಾಸ ಕುಮಟಾ, ಕಾರವಾರ, ಶಿರಸಿ, ಮುಂಡಗೋಡ ಹಾಗೂ ಹಳಿಯಾಳದ ಮೂಲಕ ಹಾದು ಹೋಗಲಿದೆ. ಎರಡು ವಾರಗಳ ಬಿಜೆಪಿಯ ರಾಜ್ಯಾಧ್ಯಕ್ಷ ಯಡ್ಯೂರಪ್ಪ ಅವರು ತಮ್ಮ ಪರಿವರ್ತನಾ ರ್ಯಾಲಿಯ ಮೂಲಕ ಭಟ್ಕಳದ ಮೂಲಕ ಜಿಲ್ಲೆಯನ್ನು ಪ್ರವೇಶಿಸಿ ಕುಮಟಾ,ಅಂಕೋಲಾ, ಶಿರಸಿ, ಮುಂಡಗೋಡ ಹಾಗೂ ಹಳಿಯಾಳಗಳಲ್ಲಿ ಸಭೆಯನ್ನು ನಡೆಸಿದ್ದರು. ಈಗ ಅದೇ ಪ್ರದೇಶದಲ್ಲಿ ಸಿದ್ದರಾಮಯ್ಯನವರು ಪ್ರವಾಸ ಹೊರಟಿದ್ದಾರೆ. ಬಿಜೆಪಿಯ ರ್ಯಾಲಿಯ ಪ್ರಭಾವವನ್ನು ಕುಗ್ಗಿಸಲು ಈ ಪ್ರವಾಸವನ್ನು ಮುಖ್ಯಮಂತ್ರಿಗಳು ಕೈಗೊಳ್ಳುತ್ತಿರುವಂತೆ ಕಂಡು ಬಂದರೂ ಇದರಿಂದ ಜಿಲ್ಲೆಗೆ ಪ್ರಯೋಜನವಾಗಲಿ ಎಂಬ ಬಯಕೆ ಜಿಲ್ಲೆಯ ಜನರದ್ದಾಗಿದೆ.

ಈ ಬಾರಿಯ ಮುಖ್ಯಮಂತ್ರಿ ಪ್ರವಾಸದ ವಿವರದಲ್ಲಿ ಶಂಕು ಸ್ಥಾಪನೆಯೇ ಹೆಚ್ಚಾಗಿದೆ. ಕಳೆದ ವಿಧಾನ ಸಭಾ ಚುನಾವಣೆಯ ವೇಳೆ ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರು ಜಿಲ್ಲೆಯಲ್ಲಿ ಸುತ್ತಾಡಿ ಹಲವು ಶಂಕು ಸ್ಥಾಪನೆಗಳನ್ನು ಮಾಡಿದ್ದರು. ಆದರೆ ಚುನಾವಣೆಯ ನಂತರ ಅವರು ಅಡಿಗಲ್ಲು ಹಾಕಿದ ಕಲ್ಲುಗಳು ಹಾಗೆಯೇ ಇವೆ. ಈ ಬಾರಿಯೂ ಚುನಾವಣೆಗೆ ನಾಲ್ಕು ತಿಂಗಳು ಇರುವಾಗ ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಅವರು ಯಾವ್ಯಾವ ಯೋಜನೆಗಳಿಗೆ ಅಡಿಗಲ್ಲು ಹಾಕುತ್ತಿದ್ದಾರೋ ಅವು ಕಾರ್ಯಗತವಾಗಲಿ ಎಂಬ ಬಯಕೆ ಜಿಲ್ಲೆಯ ಜನತೆಯದ್ದಾಗಿದೆ.