ಅಧಿಕಾರಕ್ಕಾಗಿ ಅಡ್ವಾಣಿ, ಯಡ್ಡಿ ಭೇಟಿಯಾಗಿದ್ದ ಸಿದ್ದರಾಮಯ್ಯ :

ಪ್ರಸಾದ್ ಹೊಸ ಬಾಂಬ್

ಬೆಂಗಳೂರಿನಲ್ಲಿ ಬಿಜೆಪಿ ಸೇರಲು ಸರ್ವಸಿದ್ಧತೆಯನ್ನೂ ನಡೆಸಿರುವ ಮಾಜಿ ಸಚಿವ ವಿ ಶ್ರೀನಿವಾಸ್ ಪ್ರಸಾದ್ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯಲು ಆರಂಭಿಸಿದ್ದು 2005ರಲ್ಲಿ ಜೆಡಿ(ಎಸ್) ಸಿದ್ದರಾಮಯ್ಯರನ್ನು ಪಕ್ಷದಿಂದ ಉಚ್ಛಾಟಿಸಿದಾಗ  ಅವರು ರಾಜ್ಯದ ಬಿಜೆಪಿ ನಾಯಕರೊಬ್ಬರ ಮುಖಾಂತರ ಹಿರಿಯ ನಾಯಕ ಅಡ್ವಾಣಿಯವರನ್ನು ದೆಹಲಿಯಲ್ಲಿ ಭೇಟಿಯಾಗಿ ಸೀಎಂ ಹುದ್ದೆಗೆ ತನ್ನನ್ನು ಬೆಂಬಲಿಸುವಂತೆ ಕೋರಿದ್ದರೆಂದು ಆರೋಪಿಸಿದ್ದಾರೆ.

“2009ರ ಲೋಕಸಭಾ ಚುನಾವಣೆಗೆ ಅಹಿಂದ ಅಭ್ಯರ್ಥಿಗಳನ್ನು ನಿಲ್ಲಿಸುವ ವಿಚಾರದಲ್ಲಿ ಸಿದ್ದರಾಮಯ್ಯ  ಬಿಜೆಪಿ ನಾಯಕ ಬಿ ಎಸ್ ಯಡ್ಡಿಯೂರಪ್ಪ ಅವರನ್ನೂ ಭೇಟಿಯಾಗಿದ್ದರು” ಎಂದು ಶ್ರೀನಿವಾಸ್ ಪ್ರಸಾದ್ ಹೇಳಿಕೊಂಡಿದ್ದಾರೆ. “2009ರ ಲೋಕಸಭಾ ಚುನಾವಣೆಯ ಮೊದಲೇ ಕಾಂಗ್ರೆಸ್ ಪಕ್ಷದಿಂದ ಹೊರಬರಲು ಸಿದ್ದರಾಮಯ್ಯ ಯೊಚಿಸಿದ್ದರು.  ಆಗಿನ ಮುಖ್ಯಮಂತ್ರಿ ಯಡ್ಡಿಯೂರಪ್ಪರನ್ನು ಸಂಪರ್ಕಿಸಿ ಅಹಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಎಂಟು ಸೀಟುಗಳನ್ನು ನೀಡುವಂತೆಯೂ ಕೇಳಿಕೊಂಡಿದ್ದರು.  ಆದರೆ ಯಡ್ಡಿಯೂರಪ್ಪ ಕೇವಲ ಮೂರು-ನಾಲ್ಕು ಸೀಟುಗಳನ್ನು ಆಫರ್ ಮಾಡಿದ್ದರಿಂದ ಮಾತುಕತೆಗಳು ವಿಫಲವಾಗಿದ್ದವು” ಎಂದು ಶ್ರೀನಿವಾಸ್ ಪ್ರಸಾದ್ ಆರೋಪಿಸಿದ್ದಾರೆ.

ಮತೀಯ ಶಕ್ತಿಗಳೊಡನೆ ಕೈಜೋಡಿಸುತ್ತಿದ್ದಾರೆಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಶ್ರೀನಿವಾಸ್ ಪ್ರಸಾದ್ ಅವರನ್ನು ಟೀಕಿಸಿದ್ದರೆ, ತಮ್ಮನ್ನು ಜಾತ್ಯತೀತ ಎಂದು ಕರೆಸಿಕೊಳ್ಳುತ್ತಿರುವ ಸಿದ್ದರಾಮಯ್ಯರ ನಿಜ ಬಣ್ಣವನ್ನು ಬಯಲುಗೊಳಿಸುತ್ತೇನೆಂದು ಪ್ರಸಾದ್ ಕೆಂಡ ಕಾರಿದ್ದಾರೆ.

ಅಂಬೇಡ್ಕರ್ ಅವರ ಅನುಯಾಯಿಗಳು ಅಂಬೇಡ್ಕರ್ ಬಗ್ಗೆ ಗೌರವವಿರದ ಪಕ್ಷ ಸೇರಬಾರದೆಂದು ಸಿದ್ದರಾಮಯ್ಯ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್, “1983ರಲ್ಲಿ ಅಂದಿನ ರಾಮಕೃಷ್ಣ ಹೆಗಡೆ ಸರಕಾರ 18 ಮಂದಿ ಬಿಜೆಪಿ ಶಾಸಕರ ಬಾಹ್ಯ ಬೆಂಬಲದಿಂದ ಅಧಿಕಾರಕ್ಕೆ ಬಂದಾಗ ಅವರು ಅಧಿಕಾರ ಅನುಭವಿಸಿರಲಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಹೀಗಿರುವಾಗ ಈಗ ಬಿಜೆಪಿಯನ್ನು ಟೀಕಿಸುತ್ತಿರುವ ಸಿದ್ದರಾವiಯ್ಯ ಅವಕಾಶವಾದಿ ಎಂದು  ಪ್ರಸಾದ್  ದೂರಿದ್ದಾರೆ.