ಸಿದ್ದರಾಮಯ್ಯರ ಬಾಯಲ್ಲಿ ಹಫೀಜ್ ಮಾತಿನ ಪ್ರತಿಧ್ವನಿ

ಬಿಜೆಪಿ ವಾಗ್ದಾಳಿ

ನವದೆಹಲಿ : ಕರ್ನಾಟಕ ಸೀಎಂ ಸಿದ್ದರಾಮಯ್ಯ ಮತ್ತು ಲಷ್ಕರ್ ತೊಯಿಬಾ (ಎಲ್ ಇ ಟಿ) ಸ್ಥಾಪಕ-ಭಯೋತ್ಪಾದಕ ಹಫೀಜ್ ಸಯೀದ್ ಮಧ್ಯೆ ಹೋಲಿಕೆ ಪ್ರಯತ್ನಿಸುತ್ತಿರುವ ಬಿಜೆಪಿ, ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಮುಖಂಡನ ವಾಗ್ದಾಳಿಯಲ್ಲಿ ಸಯೀದ್ ದೃಷ್ಟಿಕೋನ ಪ್ರತಿಧ್ವನಿಸುತ್ತಿದೆ ಎಂದು ಆರೋಪಿಸಿದೆ.“ಸಿದ್ದರಾಮಯ್ಯರ ಹತಾಶೆ ಮತ್ತು ಜಿಗುಪ್ಸೆ ಸ್ಪಷ್ಟವಾಗಿದೆ. ಮತ ಬ್ಯಾಂಕಿಗಾಗಿಯೇ ಅವರು ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಗಳಲ್ಲಿ ಸಯೀದ್ ದುರಾಲೋಚನೆ ಪ್ರತಿಧ್ವನಿಸುತ್ತಿದೆ. ಅವರು ತಕ್ಷಣ ತನ್ನ ಹೇಳಿಕೆಗೆ ಕ್ಷಮೆ ಯಾಚಿಸಬೇಕು” ಎಂದು ಬಿಜೆಪಿ ವಕ್ತಾರ ನರಸಿಂಹ ರಾವ್ ಆಗ್ರಹಿಸಿದರು.

ಚುನಾವಣೆಯ ಬಳಿಕ ಸಿದ್ದರಾಮಯ್ಯ ಸಯೀದನ ಹೊಸ ಪಕ್ಷ ಸೇರಿಕೊಳ್ಳುವಂತಿದೆ. ಪಾಕಿಸ್ತಾನ ಮೂಲದ ಸಯೀದ್ ಇತ್ತೀಚೆಗಷ್ಟೇ ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ್ದಾನೆ. ಬಿಜೆಪಿ ಮತ್ತು ಆರೆಸ್ಸೆಸ್ “ಹಿಂದು ಉಗ್ರವಾದಿ” ಸಂಘಟನೆ ಎಂದು ಆರೋಪಿಸಿದ ಬಳಿಕ ಬಿಜೆಪಿ ನಾಯಕರು ಗರಂ ಆಗಿದ್ದಾರೆ.

ಬಿಜೆಪಿ ಮತ್ತು ಆರೆಸ್ಸೆಸ್ “ಭಯೋತ್ಪಾದನಾ ಸಂಘಟನೆ” ಎಂದು ಸಯೀದ್ ಇತ್ತೀಚೆಗಷ್ಟೇ ಟ್ವೀಟ್ ಮಾಡಿದ್ದು, ಇದೇ ಮಾತು ಸಿದ್ದರಾಮಯ್ಯರ ಬಾಯಿಯಿಂದಲೂ ಕೇಳಿಬಂದಿದೆ ಎಂದು ರಾವ್ ಟೀಕಿಸಿದರು.

“ಸಯೀದ್ ಮತ್ತು ಸಿದ್ದರಾಮಯ್ಯ ಹೇಳಿಕೆ ಒಂದೇ ಆಗಿರುವುದರಿಂದ ಅವರ ಉದ್ಧೇಶವೂ ಒಂದೇ ಆಗಿದೆ. ಆದ್ದರಿಂದ ಕರ್ನಾಟಕ ಸೀಎಂ ತನ್ನ ತಪ್ಪಿಗೆ ಕ್ಷಮೆ ಯಾಚಿಸಬೇಕು” ಎಂದವರು ಆಗ್ರಹಿಸಿದರು.

 

 

 

LEAVE A REPLY