ಗಸ್ತುನಿರತ ಎ ಎಸ್ ಐ ಮೇಲೆ ಹಲ್ಲೆ

ಮಂಗಳೂರು : ಗಸ್ತು ನಿರತರಾಗಿದ್ದ ಉರ್ವ ಪೊಲೀಸ್ ಠಾಣೆಯ ಎಎಸ್‍ಐ ಐತಪ್ಪ ಎಂಬವರ ಮೇಲೆ ಬೈಕಿನಲ್ಲಿ ಆಗಮಿಸಿದ ದುಷ್ಕರ್ಮಿಗಳು ಏಕಾಏಕಿಯಾಗಿ ರಾಡಿನಿಂದ ಹಲ್ಲೆ ನಡೆಸಿ  ಪರಾರಿಯಾಗಿದ್ದಾರೆ. ಆಸ್ಪತ್ರೆಗೆ ದಾಖಲಾಗಿರುವ ಎ ಎಸ್ ಐ ಇದೀಗ ಚೇತರಿಸಿಕೊಂಡಿದ್ದಾರೆ. ಕರ್ತವ್ಯ ನಿರತ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ನಿನ್ನೆ ಬೆಳಿಗ್ಗೆ ಸುಮಾರು 3.30ರ ಸುಮಾರಿಗೆ ಲೇಡಿಹಿಲ್ ಸರ್ಕಲ್ ಬಳಿ ಕರ್ತವ್ಯನಿರತರಾಗಿದ್ದ ಸಂದರ್ಭದಲ್ಲಿ ಇಬ್ಬರು ದುಷ್ಕರ್ಮಿಗಳು ಬೈಕಿನಲ್ಲಿ ಆಗಮಿಸಿ “ನೀನು ಯಾವ ಠಾಣೆಯ ಪೊಲೀಸ್?” ಎಂದು ಪ್ರಶ್ನಿಸಿ, ಉತ್ತರಿಸುವಷ್ಟರಲ್ಲಿ ರಾಡಿನಿಂದ ಇವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಬ್ಯಾರಿ ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ತಿಳಿದುಬಂದಿದೆ. ಹಲ್ಲೆಗೀಡಾಗಿದ್ದ ಐತಪ್ಪ ಅವರಿಗೆ ತಲೆಗೆ ವಿಪರೀತ ಏಟು ಬಿದಿದ್ದು, ಕೂಡಲೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರೀಗ ಚೇತರಿಸಿಕೊಂಡಿದ್ದಾರೆ.

ಐತಪ್ಪ ಅವರು ದಾಖಲಾಗಿದ್ದ ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಚಂದ್ರಶೇಖರ್, ಡಿಸಿಪಿ ಸಂಜೀವ್ ಪಾಟೀಲ್ ಮತ್ತಿತರ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಘಟನೆ ಕುರಿತಂತೆ ಮಾಹಿತಿ ಪಡೆದುಕೊಂಡರು. ಆರೋಪಿಗಳ ಶೀಘ್ರ ಬಂಧನಕ್ಕೆ ಕಮಿಷನರ್ ಪೊಲೀಸರಿಗೆ ಆದೇಶ ನೀಡಿದ್ದಾರೆ. ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.