`ದಿ ವಿಲನ್’ ಚಿತ್ರದಲ್ಲಿ ಶೃತಿ ಹರಿಹರನ್

ಶಿವರಾಜಕುಮಾರ್ ಮತ್ತು ಸುದೀಪ್ ಜೊತೆಯಾಗಿ ಅಭಿನಯಿಸುತ್ತಿರುವ `ದಿ ವಿಲನ್’ ಚಿತ್ರದಲ್ಲಿ ನಟಿಸುವ ಅವಕಾಶ ಶ್ರುತಿ ಹರಿಹರನ್‍ಗೆ ಸಿಕ್ಕಿದೆ. ಇಬ್ಬರು ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ಳುವ ಯೋಗ ಯಾರಿಗಿದೆ ಎನ್ನುವ ಕುತೂಹಲ ಮೊದಲಿಂದಲೂ ಗಾಂಧಿನಗರಿಯರಿಗೆ ಇತ್ತು. ಮೊದಲು ತಮನ್ನಾ ಭಾಟಿಯಾ ಹೆಸರು ಬಂತು. ನಂತರ ಆಮಿ ಜಾಕ್ಸನ್ ಹೆಸರು ಕೇಳಿ ಬಂದಿತ್ತು. ಈಗ ಶೃತಿ ಹರಿಹರನ್ ಆಯ್ಕೆಯಾಗಿದ್ದಾಳಂತೆ. ಹಾಗಂತ ಆಮಿ ಈ ಚಿತ್ರದಿಂದ ಔಟ್ ಆಗಿರುವ ಬಗ್ಗೆ ಸುದ್ದಿ ಇಲ್ಲ. ಶ್ರುತಿ ಪಾತ್ರವೇ ಬೇರೆ ಮತ್ತು ಈ ಚಿತ್ರದಲ್ಲಿ ಆಕೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾಳಂತೆ. ಈ ವಿಷಯವನ್ನು ಖುದ್ದು ಶೃತಿಯೇ ಹೊರಹಾಕಿದ್ದು ಪಾತ್ರ ಚಿಕ್ಕದಾದರೂ ಶಿವರಾಜಕುಮಾರ್ ಎದುರು ನಟಿಸುತ್ತಿರುವುದು ತನಗೆ ಖುಷಿ ಕೊಟ್ಟಿದೆ ಎಂದು ಟ್ವೀಟ್ ಮಾಡಿದ್ದಾಳೆ.
ಇದೀಗ `ದಿ ವಿಲನ್’ ಚಿತ್ರದ ಟೀಸರ್ ಶೂಟಿಂಗ್ ಶುರುವಾಗಿದ್ದು ಅವರಿಬ್ಬರ ಫಸ್ಟ್ ಲುಕ್ ಸದ್ಯದಲ್ಲೇ ಬಿಡುಗಡೆ ಮಾಡುವುದಕ್ಕೆ ಸಿದ್ಧತೆ ನಡೆಸಿದ್ದಾರಂತೆ ಚಿತ್ರದ ನಿರ್ದೇಶಕ ಪ್ರೇಮ್. ಅಂದ ಹಾಗೆ ಶೃತಿ ಹರಿಹರನ್ ಈಗ `ಬ್ಯೂಟಿಫುಲ್ ಮನಸ್ಸುಗಳು’ ಚಿತ್ರದ ಸಕ್ಸಸ್ಸಿನ ಅಲೆಯಲ್ಲಿ ತೇಲುತ್ತಿದ್ದಾಳೆ.