ಗಂಡನ ಅನೈತಿಕತೆಯನ್ನು ಸಹಿಸಿಕೊಂಡಿರಬೇಕೇ?

ಪ್ರ : ಮದುವೆಯಾಗಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಮಗನಿದ್ದಾನೆ. ನನ್ನ ಗಂಡ ಒಬ್ಬರು ಪ್ರತಿಷ್ಠಿತ ವ್ಯಕ್ತಿ. ಅವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರಿದೆ ಕೂಡಾ. ಆದರೆ ಅವರ ಒಳಗಿನ ಗುಟ್ಟು ನನಗೇ ಗೊತ್ತು. ಅವರು ಹೊರಪ್ರಪಂಚಕ್ಕೆ ಒಳ್ಳೆಯವರಂತೆ ಫೋಸ್ ಕೊಟ್ಟರೂ ಅವರ ಅಸಲೀತನ ಮಾತ್ರ ಸಾಚಾ ಅಲ್ಲ. ಅವರಿಗೆ ಶ್ರೀಮಂತಿಕೆ ಬಂದಿದ್ದೂ ಸರಿಯಾದ ಮಾರ್ಗದಿಂದಲ್ಲ. ಪ್ರತಿಯೊಂದರಲ್ಲೂ ಅನೀತಿಯುತವಾಗಿ ಕಟ್ಸ್ ಹೊಡೆಯುತ್ತಾ ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿ ಮಾಡಿಕೊಂಡಿದ್ದಾರೆ. ಮೊದಲೆಲ್ಲ ಅವರ ಶ್ರೀಮಂತಿಕೆಯ ವೈಭೋಗಕ್ಕೆ ನಾನೂ ಮರುಳಾಗಿದ್ದೆ. ಅವರು ಯಾವ ರೀತಿಯಿಂದ ಸಂಪಾದನೆ ಮಾಡಿದ್ದಾರೆ ಅಂತಲೂ ಗಮನಹರಿಸದೇ ಐಷಾರಾಮೀ ಜೀವನದಲ್ಲಿ ಮೈಮರೆತಿದ್ದೆ. ಅವರಿಗೆ ಯಾರ ಜೊತೆ ಸಂಬಂಧ ಇದೆ ಅನ್ನುವ ಗೊಡವೆಗೂ ಹೋಗದೇ ನನ್ನನ್ನು ಮತ್ತು ಮಗನನ್ನು ಮಾತ್ರ ಚೆನ್ನಾಗಿಟ್ಟರೆ ಸಾಕು ಅಂತ ಜಾಲಿಯಾಗಿಯೇ ಇದ್ದೆ. ಸಂಜೆಯ ನಂತರ ಮದ್ಯದ ಅಮಲಿನಲ್ಲಿ ಯಾರದೋ ಮಗ್ಗುಲಲ್ಲಿ ಬಿದ್ದು ಮಧ್ಯರಾತ್ರಿ ಕಳೆದ ನಂತರ ಮನೆಗೆ ಬಂದರೂ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ನನಗೆ ಈ ಜೀವನದ ಬಗ್ಗೆ ಬೇಸರ ಮೂಡುತ್ತಿದೆ. ಎಷ್ಟು ದಿನ ನಾನು ಈ ಡಂಭಾಚಾರದ ಜೀವನ ಸಹಿಸಿಕೊಂಡಿರಲಿ? ಬಡತನವಾದರೂ ನಿಯತ್ತಿನಿಂದ ಬದುಕುವ ಜೀವನ ನನಗೆ ಬೇಕು ಅನಿಸುತ್ತಿದೆ. ಗಂಡನ ನಿಜವಾದ ಪ್ರೀತಿಗಾಗಿ ಮನಸ್ಸು ಹಂಬಲಿಸುತ್ತಿದೆ. ಬೇರೆಯವರ ಜೊತೆ ಮಲಗೆದ್ದು ಬಂದ ಗಂಡನ ಜೊತೆ ಹಾಸಿಗೆ ಹಂಚಿಕೊಳ್ಳಲು ಮನಸ್ಸು ಹಿಂದೇಟು ಹಾಕುತ್ತಿದೆ. ಆದರೆ ಈ ವಯಸ್ಸಿನಲ್ಲಿ ಮನೆಯಿಂದ ಹೊರನಡೆದು ಬದುಕುವ ಧೈರ್ಯವೂ ನನ್ನಲ್ಲಿಲ್ಲ. ಅದೂ ಅಲ್ಲದೇ ನಾನು ಹೊರನಡೆದರೆ ನನ್ನ ಗಂಡನ ಪ್ರೆಸ್ಟೀಜ್ ಕಳೆದುಹೋಯಿತೆಂದು ಅವರು ನನ್ನನ್ನು ನಿರಾಳವಾಗಿ ಬದುಕಲು ಖಂಡಿತಾ ಬಿಡುವುದಿಲ್ಲ. ಮಗನೂ ಈಗ ಶ್ರೀಮಂತಿಕೆಯ ಜೀವನಕ್ಕೆ ಹೊಂದಿಕೊಂಡಿರುವುದರಿಂದ ಅವನ ಭವಿಷ್ಯದ ಪ್ರಶ್ನೆಯೂ ಇದೆ. ಆದರೆ ಅವರ ಈ ಅನೈತಿಕತೆಗೆ ಇನ್ನೆಷ್ಟು ದಿನ ಕುರುಡಾಗಿರಬೇಕು?

: ನಿಮ್ಮ ಗಂಡನಂತೆ ತಾವೊಬ್ಬರು ಸತ್ಯ ಹರಿಶ್ಚಂದ್ರನ ವಂಶಸ್ಥರು ಅನ್ನುವ ಮುಖವಾಡ ಹಾಕಿಕೊಂಡು ಸಮಜಘಾತುಕ ಕೆಲಸ ಮಾಡಿ ವೈಭೋಗದಲ್ಲಿ ಮೆರೆಯುವ ಎಷ್ಟೋ ಮಂದಿ ನಮ್ಮ ನಡುವೆ ಇದ್ದಾರೆ. ನಮ್ಮ ಜನರೂ ಅಷ್ಟೇ. ದುಡ್ಡಿದ್ದವರಿಗೆ ಮಾತ್ರ ಮಣೆ ಹಾಕುತ್ತಾರೆ. ಅವರಿಗೇ ಜೈಕಾರ ಕೂಗುತ್ತಾ ಅವರ ಹಿಂದೆಮುಂದೆ ಅಲೆದು ತಮ್ಮ ಕೈಗೂ ಸ್ವಲ್ಪ ಜೇನು ಮೆತ್ತಿಕೊಳ್ಳುತ್ತದಾ ಅಂತ ಹಪಹಪಿಸುವ ಮಂದಿ ಸಾಕಷ್ಟಿರುತ್ತಾರೆ. ಅದೂ ಅಲ್ಲದೇ ತಮ್ಮ ಈಗೋ ಹೆಚ್ಚಿಸಿಕೊಳ್ಳಲು ತಮಗೆ ಬೋಪರಾಕ್ ಹೇಳುವ ಜನರನ್ನು ಅವರು ಸಾಕಿಕೊಳ್ಳುತ್ತಾರೆ ಕೂಡಾ. ತಮಗೆ ಬೇಕಾದ್ದನ್ನು ಸಪ್ಲೈ ಮಾಡುವ ಜನರೂ ಅಂತವರ ಬಳಿ ಇರುತ್ತಾರೆ. ಅಂತಹ ಜನರಿಗೆ ಹೆಂಡತಿಯೆಂದರೆ ಒಂದು ಭೋಗದ ವಸ್ತು ಅಷ್ಟೇ. ಸಮಾಜದ ಎದುರಿಗೆ ತೋರಿಸಿಕೊಳ್ಳಲು ಸರ್ವಾಲಂಕಾರ ಭೂಷಿತೆ ಮುಗ್ಧ ಹೆಣ್ಣು ಬೇಕು ಅವರಿಗೆ. ನೀವೂ ಮೊದಲು ಅದೇ ಕೆಟಗರಿಗೆ ಸೇರಿದವರಾಗಿದ್ದಿರಿ. ಗಂಡ ಕೊಡಿಸುವ ಆಭರಣ ಧರಿಸಿ ಸುಖದ ಸುಪ್ಪತ್ತಿಗೆಯಲ್ಲಿ ಮೈಮರೆತಿದ್ದಿರಿ. ನೀವು ಅವರ ಜೀವನ ಪ್ರವೇಶಿಸಿದ ತಕ್ಷಣ ಅವರ ಸಂಪಾದನೆಯ ಮೂಲದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಅನೀತಿಯುತವಾಗಿ ಬಂದ ಹಣದಿಂದ ತಂದ ಯಾವ ವಸ್ತುವನ್ನೂ ಮುಟ್ಟುವುದಿಲ್ಲ ಅಂತ ನೀವು ಆಗಲೇ ಸತ್ಯಾಗ್ರಹ ಹೂಡಬೇಕಿತ್ತು. ನ್ಯಾಯಯುತವಾಗಿ ಬಂದ ಸಂಪಾದನೆಯಲ್ಲಿಯೇ ಮಗನನ್ನು ಬೆಳೆಸುವುದಾಗಿ ಹಠ ಹಿಡಿಯಬೇಕಿತ್ತು. ಪರೋಕ್ಷವಾಗಿ ನೀವೂ ಗಂಡನ ಪಾಪದಲ್ಲಿ ಪಾಲುಗಾರರಾಗಿದ್ದೀರಿ. ನ್ಯಾಯಯುತವಾಗಿ ರಾಜಮಾರ್ಗದಲ್ಲಿ ಸಾಕಷ್ಟು ಸಂಪಾದಿಸಿ ಉತ್ತಮ ಬದುಕು ಕಂಡುಕೊಳ್ಳುವುದು ತಪ್ಪಲ್ಲ. ಈಗ ಆಗಿದ್ದು ಆಯಿತು. ಇನ್ನಾದರೂ ಗಂಡನಿಗೆ ಬುದ್ಧಿ ಹೇಳಿ. ಎಲ್ಲಾ ಕಪ್ಪುದಂಧೆ ಬಿಟ್ಟು ಸರಳವಾಗಿ ಬದುಕಿದರೆ ಅದರಲ್ಲಿ ಸಿಗುವ ತೃಪ್ತಿ ಇಂತಹ ಜೀವನದಲ್ಲಿ ಇಲ್ಲ ಅಂತ ತಿಳಿಸಿಹೇಳಿ. ಆದರೆ ಒಮ್ಮೆ ಅಂತಹ ಜೀವನಕ್ಕೆ ಹೊಂದಿಕೊಂಡರೆ ಅಲ್ಲಿಂದ ಹೊರಬರುವುದು ಬಹಳ ಕಷ್ಟ. ನಿಮ್ಮ ಕೈಲಾದ ಪ್ರಯತ್ನ ನೀವು ಮಾಡಿ. ನಿಮ್ಮಷ್ಟಕ್ಕೆ ನೀವು ಸರಳ ಜೀವನವನ್ನು ಅಳವಡಿಸಿಕೊಳ್ಳಬಹುದು. ಬೇರೆಯವರ ಜೊತೆ ಮಲಗೆದ್ದು ಬಂದ ಗಂಡನಿಂದ ದೂರವೇ ಇರಬಹುದು. ಹೆಂಡತಿಯ ಮನಸ್ಸಿಗೆ ನೋವಾಗುತ್ತದೆ ಅಂತ ಅವರು ಸಾಚಾತನ ತೋರಿದರೆ ನಿಮ್ಮ ಅದೃಷ್ಟ. ಯೋಗ, ಧ್ಯಾನ, ನಿಮ್ಮ ಕೈಲಾದ ಸಮಜಸೇವೆ ಮಾಡುತ್ತಾ ಜೀವನದಲ್ಲಿ ತೃಪ್ತಿ ಕಾಣಬಹುದು.