ಗರ್ಲ್ಫ್ರೆಂಡಿನ ಸ್ನೇಹಿತೆಯನ್ನು ಮದುವೆಯಾಗಬೇಕಾ ?

ಪ್ರ : ನಾನು ಒಬ್ಬಳು ಹುಡುಗಿಯನ್ನು ಪ್ರೀತಿಸುತ್ತಿದ್ದೇನೆ. ಅವಳಿಗೂ ನನ್ನ ಮೇಲೆ ಒಲವು ಇದೆ. ಆದರೆ ನಮ್ಮಿಬ್ಬರ ಪ್ರೀತಿ ಯಾರಿಗೂ ಗೊತ್ತಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಮಾತ್ರ ಅಂತ ಉಳಿದವರು ತಿಳಿದುಕೊಂಡಿದ್ದಾರೆ. ಅವಳು ತನ್ನ ಆಪ್ತ ಗೆಳತಿಗೂ ನಮ್ಮ ಪ್ರೀತಿಯ ಬಗ್ಗೆ ಹೇಳಿರಲಿಲ್ಲ. ನಮ್ಮ ಫ್ರೆಂಡ್ಸ್ ಸರ್ಕಲ್‍ನಲ್ಲಿ ಐದು ಜನರಿದ್ದೇವೆ. ಒಮ್ಮೆ ನಾವೆಲ್ಲ ಸೇರಿಕೊಂಡು ಪಿಕ್ನಿಕ್ಕಿಗೆ ಹೋಗಿದ್ದೆವು. ಬರುವಾಗ ರಾತ್ರಿಯಾಗಿತ್ತು. ನನ್ನ ಹುಡುಗಿಯ ಸ್ನೇಹಿತೆಯ ಮನೆಗೆ ಹೋಗಲು ಆ ಸಮಯದಲ್ಲಿ ಬಸ್ ಇಲ್ಲದ ಕಾರಣ ನಾನು ನನ್ನ ಬೈಕಿನಲ್ಲಿ ಅವಳನ್ನು ಬಿಡಲು ಹೋದೆ. ಆದರೆ ಮಳೆ ಜೋರಾಗಿ ಬರುತ್ತಿದ್ದರಿಂದ ರಸ್ತೆಯೂ ಸರಿಯಾಗಿ ಕಾಣಿಸುತ್ತಿರಲಿಲ್ಲ. ರಸ್ತೆಯ ಮಧ್ಯೆ ಇರುವ ದೊಡ್ಡ ಹೊಂಡಕ್ಕೆ ನನ್ನ ಬೈಕ್ ಇಳಿದು ಸ್ಕಿಡ್ಡಾಗಿ ಇಬ್ಬರೂ ಕೆಳಗುರುಳಿದೆವು. ನನಗೆ ಚಿಕ್ಕಪುಟ್ಟ ಗಾಯಗಳಾಯಿತು ಅಷ್ಟೇ. ಆದರೆ ಆ ಹುಡುಗಿಯ ಕಾಲು ಮುರಿದಿದ್ದರಿಂದ ಒಳಗಡೆ ರಾಡ್ ಹಾಕಬೇಕಾಯಿತು. ಈಗ ವಾಕರ್ ಸಹಾಯದಿಂದ ನಡೆಯುತ್ತಿದ್ದಾಳೆ.  ಮುಂದೆಯೂ ಕೂಡಾ ಕಾಲು ಸ್ವಲ್ಪ ಊನವಾಗಿಯೇ ಉಳಿಯಬಹುದು ಅಂತ ಡಾಕ್ಟರ್ ಹೇಳಿದ್ದಾರೆ. ಅವಳಿಗೆ ಮದುವೆ ನಿಶ್ಚಯವಾಗಿತ್ತು. ಅವಳ ಈ ಸ್ಥಿತಿಯಿಂದಾಗಿ ಗಂಡಿನ ಕಡೆಯವರು ಈಗ ಮದುವೆಗೆ ಒಪ್ಪುತ್ತಿಲ್ಲ. ನನ್ನಿಂದಾಗಿಯೇ ಅವಳಿಗೆ ಈ ಸ್ಥಿತಿ ಬಂತು ಅನ್ನುವ ಗಿಲ್ಟ್ ನನ್ನನ್ನು ಕಾಡುತ್ತಿದೆ. ನನ್ನ ಹುಡುಗಿಯೂ ಈಗ `ಅವಳನ್ನು ನೀನೇ ಮದುವೆಯಾಗು’ ಅಂತ ಒತ್ತಾಯಿಸುತ್ತಿದ್ದಾಳೆ. ನನಗೆ ಆ ಹುಡುಗಿಯ ಬಗ್ಗೆ ಕರುಣೆಯಿದ್ದರೂ ಪ್ರೀತಿಯಿಲ್ಲ. ಆದರೂ ಅವಳನ್ನೇ ಮದುವೆಯಾಗುವುದು ನ್ಯಾಯ ಅಂತ ಮನಸ್ಸು ಹೇಳುತ್ತಿದೆ. ಆದರೆ ಹೃದಯ ನಾನು ಪ್ರೀತಿಸುತ್ತಿದ್ದ ಹುಡುಗಿಯನ್ನೇ ಬಯಸುತ್ತಿದೆ. ನಾನು ಯಾರನ್ನು ಮದುವೆಯಾಗಲಿ?

: ನಿಮ್ಮ ಗರ್ಲ್‍ಫ್ರೆಂಡಿನ ಗೆಳತಿಯ ಕಾಲಿಗೆ ಪೆಟ್ಟಾಯಿತು ಎನ್ನುವ ಕಾರಣಕ್ಕೆ ಅವಳ ಮದುವೆ ನಿಂತಿತು ಅಂದರೆ ದೇವರೇ ಆ ಹುಡುಗಿಯನ್ನು ಆ ಹುಡುಗನ ಕಡೆಯವರಿಂದ ರಕ್ಷಿಸಿದರು ಅಂತಲೇ ಅನ್ನಬೇಕು. ಮಾನವೀಯತೆ ಅನ್ನುವುದು ಅವರಿಗೆ ಸ್ವಲ್ಪವೂ ಇಲ್ಲ ಅಂತ ಇದರಿಂದಲೇ ಗೊತ್ತಾಗುತ್ತದೆ. ಒಂದು ವೇಳೆ ಮದುವೆಯ ನಂತರ ಆ ಹುಡುಗಿ ಕಾಲು ಮುರಿದುಕೊಂಡಿದ್ದರೆ ಆಗಲೂ ಅವರು ಅವಳನ್ನು ತ್ಯಜಿಸಲು ಹಿಂದೆ ಮುಂದೆ ನೋಡುತ್ತಿರಲಿಲ್ಲವೇನೋ. ಅವಳು ನಿಮ್ಮ ಜೊತೆ ಹೋಗುವಾಗ ಬೈಕಿನಿಂದ ಬಿದ್ದು ಕಾಲುಮುರಿದುಕೊಂಡಿದ್ದರೂ ಅದಕ್ಕೆ ನೀವೇ ಕಂಪ್ಲೀಟ್ ಹೊಣೆ ಅಂತ ಹೇಳಲು ಬರುವುದಿಲ್ಲ. ನೀವೇನು ಬೇಕೆಂದೇ ಅವಳನ್ನು ಕೆಡವಿದ್ದಲ್ಲವಲ್ಲ. ಅದೊಂದು ಕೆಟ್ಟ ಘಳಿಗೆಯಷ್ಟೇ. ಅದಕ್ಕಾಗಿ ನಿಮಗೆ ಅವಳ ಮೇಲೆ ಪ್ರೀತಿ ಇಲ್ಲದಿದ್ದರೂ ಮದುವೆಯಾಗುವುದು ಸರಿಯಲ್ಲ. ನಿಮಗೆ ಅವಳ ಮೇಲಿರುವುದು ಬರೀ ಕನಿಕರ ಅಂತ ಮುಂದೆ ಗೊತ್ತಾದರೆ ಆ ಹುಡುಗಿ ನಿಮ್ಮ ಜೊತೆ ಸಂತೋಷದಲ್ಲಿರುತ್ತಾಳಾ? ಅದೂ ಅಲ್ಲದೇ ಅವಳ ಗೆಳತಿಯನ್ನು ಪ್ರೀತಿಸುತ್ತಿದ್ದವರು ನೀವು ಮತ್ತು ಅವಳಿಗಾಗಿ ನೀವಿಬ್ಬರೂ ನಿಮ್ಮ ಪ್ರೀತಿಯನ್ನು ತ್ಯಾಗ ಮಾಡಿದಿರಿ ಅಂತ ಯಾವಾಗಲಾದರೂ ಅವಳಿಗೆ ತಿಳಿದರೆ ಅವಳು ಖಂಡಿತಾ ನೊಂದುಕೊಳ್ಳುತ್ತಾಳೆ. ಅವಳನ್ನು ಮದುವೆಯಾದರೂ ನಿಮ್ಮ ಪ್ರೇಮಿಯನ್ನು ಮರೆಯಲಾಗದೇ, ಸಂಪೂರ್ಣವಾಗಿ ಇವಳಿಗೆ ಪ್ರೀತಿ ಕೊಡಲಾಗದೇ ಮಾನಸಿಕ ಹಿಂಸೆ ಅನುಭವಿಸಬೇಕಾಗಬಹುದು. ನಿಮ್ಮ ಗರ್ಲ್‍ಫ್ರೆಂಡಿಗಂತೂ ನಿಮ್ಮನ್ನು ಮರೆಯುವುದು ಮತ್ತಷ್ಟು ಕಷ್ಟವಾಗಬಹುದು. ಪ್ರೀತಿಗಿಂತ ತ್ಯಾಗವೇ ಮುಖ್ಯವಾದರೂ ಇದರಿಂದ ನೀವು ಮೂರು ಜನರೂ ನೋವನುಭವಿಸುವುದಕ್ಕಿಂತ ಆ ಹುಡುಗಿಗೆ ಬೇರೆ ಸರಿಯಾದ ಗಂಡು ಹುಡುಕುವುದೇ ಒಳ್ಳೆಯದು. ಅದೂ ಅಲ್ಲದೇ ಮದುವೆ ಸ್ವಲ್ಪ ತಡವಾದರೂ ಚಿಂತೆ ಇಲ್ಲ. ಅವಳಿಗೆ ಈಗ ಬೇಕಾಗಿರುವುದು ಕನಿಕರಕ್ಕಿಂತ ಆತ್ಮವಿಶ್ವಾಸ ತುಂಬಬಲ್ಲ ಸ್ನೇಹಿತರು. ಅವಳು ಎದ್ದುನಿಂತು ತನ್ನ ಬಾಳು ತಾನು ರೂಪಿಸಿಕೊಳ್ಳಲು ಮೊದಲು ನೀವೆಲ್ಲ ಸಹಕರಿಸಿ. ನಿಮಗೆ ಅಷ್ಟು ಗಿಲ್ಟ್ ಇದ್ದರೆ ಅವಳಿಗೊಂದು ದಾರಿ ತೋರಿಸಿದ ನಂತರವೇ ನೀವು ನಿಮ್ಮ ಗರ್ಲ್‍ಫ್ರೆಂಡನ್ನು ಮದುವೆಯಾಗಿ.