ಮೆಡಿಕಲ್ ವಿದ್ಯಾರ್ಥಿಗಳಿಗೆ ನೀಟ್, ಪಿಜಿ ಪರೀಕ್ಷೆಗೆ ಸೆಂಟರುಗಳ ಸಮಸ್ಯೆ

ಸಾಂದರ್ಭಿಕ ಚಿತ್ರ

ಕರಾವಳಿ ಜಿಲ್ಲೆಯಲ್ಲಿರುವುದು ಕೇವಲ 2 ಕೇಂದ್ರಗಳು

ನಮ್ಮ ಪ್ರತಿನಿಧಿ ವರದಿ

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 9 ಮೆಡಿಕಲ್ ಕಾಲೇಜುಗಳು ಇದ್ದರೂ ನೀಟ್ ಮತ್ತು ಪಿಜಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳು ಕೇವಲ ಎರಡು ಕೇಂದ್ರಗಳನ್ನು ಆಶ್ರಯಿಸಬೇಕಾಗಿದೆ. ಇದರಿಂದ ಸುಮಾರು 1500ಕ್ಕೂ ಅಧಿಕ ವೈದ್ಯ ವಿದ್ಯಾರ್ಥಿಗಳು ಕಷ್ಟ ಎದುರಿಸುವಂತಾಗಿದೆ. ಈಗ ಇರುವ ಎರಡು ಸೆಂಟರಗಳೂ ಕೂಡಾ ಉಡುಪಿ ಜಿಲ್ಲೆಯಲ್ಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ.

ಒಂದು ಸೆಂಟರಿನಲ್ಲಿ 200 ವಿದ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಇರುವುದರಿಂದ ಎರಡು ಸೆಂಟರುಗಳಲ್ಲಿ 400 ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ. ಇಳಿದ 1100 ವಿದ್ಯಾರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಉನ್ನತ ವ್ಯಾಸಂಗಕ್ಕಾಗಿ ನೀಟ್-ಪಿಜಿ ಪರೀಕ್ಷೆ ಬರೆಯಲು ಹೊರ ರಾಜ್ಯಕ್ಕೆ ತೆರಳಬೇಕಾಗಿದೆ. ಇದರಿಂದ ಆರ್ಥಿಕ ಕಷ್ಟವನ್ನೂ ಎದುರಿಸಬೇಕಾದ ದಯನೀಯ ಸ್ಥಿತಿ ಇದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಈ ಹಿಂದೆ ಕೇವಲ ಒಂದು ಕೇಂದ್ರ ಮಾತ್ರ ಇತ್ತು. ಬಳಿಕ ಬಹಳಷ್ಟು ಬೇಡಿಕೆ ಬಂದ ಕಾರಣ ಮತ್ತು ಮೆಡಿಕಲ್ ವಿದ್ಯಾರ್ಥಿಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ನೀಟ್-ಪಿಜಿ ರಿಜಿಸ್ಟ್ರೇಷನ್ ಆರಂಭವಾದ ಬಳಿಕ ನವೆಂಬರ್ 7ರಂದು ಇನ್ನೊಂದು ಕೇಂದ್ರ ಪ್ರಾರಂಭಿಸಲಾಯಿತು. ಆದರೆ 9 ಮೆಡಿಕಲ್ ಕಾಲೇಜುಗಳು ಇರುವ ಇಲ್ಲಿ ಎರಡು ಕೇಂದ್ರಗಳು ಸಾಕೇ ಎನ್ನುವ ಪ್ರಶ್ನೆ ಕಾಡುತ್ತಿದೆ. ಈ ಕಾರಣಕ್ಕಾಗಿ ಅವಿಭಜಿತ ಜಿಲ್ಲೆಯ ಬಹುತೇಕ ವಿದ್ಯಾರ್ಥಿಗಳು ಮಹಾರಾಷ್ಟ್ರದಿಂದ ನೀಟ್-ಪಿಜಿ ಪರೀಕ್ಷೆ ಬರೆಯುತ್ತಿದ್ದಾರೆ. ಇನ್ನು ಕೆಲವರು ಶಿವಮೊಗ್ಗ ಕೇಂದ್ರದಿಂದ ಪರೀಕ್ಷೆ ಬರೆಯುತ್ತಿದ್ದಾರೆ.

ಆನ್ಲೈನಿನಲ್ಲಿ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಇನ್ನೊಂದು ರೀತಿಯ ಕಷ್ಟ ಎದುರಿಸುತ್ತಿದ್ದಾರೆ. ಪರೀಕ್ಷೆ ಫೀಸು ಪಾವತಿಸುವ ಸಂದರ್ಭದಲ್ಲಿ ವೆಬ್ ಸೈಟ್ ಕ್ರಾಶ್ ಆದರೆ ವೆಬ್ ಸೈಟ್ ತೆರೆದುಕೊಳ್ಳುವಷ್ಟರಲ್ಲಿ 200 ಸೀಟುಗಳೂ ಭರ್ತಿಯಾಗಿರುತ್ತವೆ. ಬಳಿಕ ದಾರಿ ಕಾಣದೇ ಶಿವಮೊಗ್ಗ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ ಅಲ್ಲಿಂದಲೇ ಪರೀಕ್ಷೆ ಬರೆಯುವ ಅನಿವಾರ್ಯತೆ ವಿದ್ಯಾರ್ಥಿಗಳದ್ದು.

ಪರೀಕ್ಷಾ ಪ್ರಾಧಿಕಾರವು ಕೇವಲ ಪ್ರಾದೇಶಿಕತೆಯ ಬಗ್ಗೆ ಮಾತ್ರ ಆದ್ಯತೆ ನೀಡದೇ ವಿದ್ಯಾರ್ಥಿಗಳಿಗೂ ಅನುಕೂಲತೆಯನ್ನು ಕಲ್ಪಿಸಿಕೊಡಬೇಕು ಎನ್ನುತ್ತಾರೆ ವೈದ್ಯ ವಿದ್ಯಾರ್ಥಿಗಳು.